Home Latest ಅಶ್ಲೀಲ ಫೋಟೋ ವೈರಲ್ ಬೆದರಿಕೆ: ₹2.77 ಕೋಟಿ ವಸೂಲಿ ಆರೋಪ, ಇಬ್ಬರ ಬಂಧನ

ಅಶ್ಲೀಲ ಫೋಟೋ ವೈರಲ್ ಬೆದರಿಕೆ: ₹2.77 ಕೋಟಿ ವಸೂಲಿ ಆರೋಪ, ಇಬ್ಬರ ಬಂಧನ

ಮಂಗಳೂರು : ಅಶ್ಲೀಲ ಫೋಟೋ ಮತ್ತು ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ, ಕೊಲೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಹೆದರಿಸಿ ಒಟ್ಟು ₹2.77 ಕೋಟಿ ಹಣ ವಸೂಲಿ ಮಾಡಿರುವ ಆರೋಪದಡಿ ಇಬ್ಬರ ವಿರುದ್ಧ ದೂರು ದಾಖಲಾಗಿದೆ.

 

ದೂರಿನ ಪ್ರಕಾರ, ನವಭಾರತ್ ಸರ್ಕಲ್‌ನ ಬ್ರಹ್ಮ ಸಮಾಜ ಕಟ್ಟಡದ ಮೊದಲ ಮಹಡಿಯಲ್ಲಿ ಗುಪ್ತಿ ಕಂಪನಿ ನಡೆಸುತ್ತಿದ್ದ

ಶೇಖರ್ ಎಂಬವರ ಬಳಿ ಕೆಲಸ ಮಾಡುತ್ತಿದ್ದ ಜಿತೇಶ್ ಹಾಗೂ ನಿಜಾಮ್ @ಇಬ್ರಾಹಿಂ ಎಂಬವರು ಈ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.

 

ಜಿತೇಶ್ 2024ರ ಜೂನ್ ತಿಂಗಳಲ್ಲಿ ಶೇಖರ್ ಅವರ ಮೊಬೈಲ್‌ಗೆ ಕರೆ ಮಾಡಿ, ಅವರೊಂದಿಗೆ ಇರುವ ಅಶ್ಲೀಲ ಫೋಟೋ ಹಾಗೂ ವಿಡಿಯೋ ತನ್ನ ಬಳಿ ಇರುವುದಾಗಿ ಹೇಳಿ, ಅದನ್ನು ವೈರಲ್ ಮಾಡುವುದಾಗಿ ಹಾಗೂ ಅವರ ಪತ್ನಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದಕ್ಕಾಗಿ ₹35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

 

ಬಳಿಕ ಕದ್ರಿಯ ಬೃಂದಾವನ ಹೋಟೆಲ್‌ನಲ್ಲಿ ಭೇಟಿಯಾಗಿ, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಭಯಗೊಂಡ ಶೇಖರ್ ಅವರು ಎಸ್‌ಬಿಐ ಕಾಪಿಕಾಡ್ ಶಾಖೆಯ ಖಾತೆಯಿಂದ ₹10 ಲಕ್ಷ ಮೊತ್ತದ ಎರಡು ಚೆಕ್ ಹಾಗೂ ₹15 ಲಕ್ಷದ ಒಂದು ಚೆಕ್ ನೀಡಿದ್ದು, ಜಿತೇಶ್ ₹20 ಲಕ್ಷ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ

ನಂತರ 2024ರ ಮೇ ತಿಂಗಳಲ್ಲಿ ಶೇಖರ್ ಅವರ ಮೇರಿಹಿಲ್ ನಿವಾಸಕ್ಕೆ ಬಂದ ಜಿತೇಶ್ ಹೆಚ್ಚಿನ ಹಣಕ್ಕಾಗಿ ಒತ್ತಡ ಹೇರಿದಾಗ, ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಿಜಾಮ್ ವಿಷಯ ತಿಳಿಸಲಾಗಿದೆ.

 

ನಿಜಾಮ್ ಜಿತೇಶ್‌ನನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.

ಆ ಬಳಿಕ ನಿಜಾಮ್ ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ ಬರೆದಿರುವ ಆತ್ಮಹತ್ಯೆ ಪತ್ರದಲ್ಲಿ ಶೇಖರ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿ, ಕೊಲೆ ಪ್ರಕರಣದಲ್ಲಿ ಸಿಲುಕಿಸಿ 10 ವರ್ಷ ಜೈಲು ಶಿಕ್ಷೆಯಾಗುವಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಇದೇ ನೆಪದಲ್ಲಿ 2024ರ ಜೂನ್‌ನಿಂದ 2026ರ ಜನವರಿವರೆಗೆ ಒಟ್ಟು ₹2.57 ಕೋಟಿ ಹಣವನ್ನು ಪಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದಾದ ಬಳಿಕ ಜಿತೇಶ್ ಜೀವಂತವಾಗಿಯೇ ಮಂಗಳೂರಿನಲ್ಲಿ ಕಂಡುಬಂದಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ನಿಜಾಮ್ ಮತ್ತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಅಲ್ಲದೆ, ಜೂನ್ 1, 2026ರಂದು ಜಿತೇಶ್ ಪುನಃ ಕರೆ ಮಾಡಿ ಅಶ್ಲೀಲ ಫೋಟೋ ಮತ್ತು ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ₹10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಒಟ್ಟಾರೆ, ಅಶ್ಲೀಲ ಫೋಟೋ ವೈರಲ್ ಮಾಡುವುದಾಗಿ ಹಾಗೂ ಸುಳ್ಳು ಆತ್ಮಹತ್ಯೆ ನಾಟಕವಾಡಿ ಕೊಲೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ₹2.77 ಕೋಟಿ ಹಣ ವಸೂಲಿ ಮಾಡಿರುವುದಾಗಿ ಆರೋಪಿಸಿ, ಜಿತೇಶ್ ಮತ್ತು ನಿಜಾಮ್ @ ಇಬ್ರಾಹಿಂ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶೇಖರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

 

ಪೊಲೀಸ್ ಕ್ರಮ:

ಭಾರತೀಯ ನ್ಯಾಯ ಸಂಹಿತೆ (BNS), 2023 ರ ಸೆಕ್ಷನ್ 308(5) (ವಂಚನೆ) ಮತ್ತು 351(2) (ಅಪರಾಧಿಕ ಬೆದರಿಕೆ) ಅಡಿಯಲ್ಲಿ ಉರ್ವಾ ಪೊಲೀಸರು ಅಪರಾಧ ಸಂಖ್ಯೆ 0059/2026 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಡ್ ಕಾನ್ಸ್‌ಟೇಬಲ್ ಪರಶುರಾಮ ನಂದ್ಯಾಲ್ ಅವರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

 

ಆರೋಪಿಗಳಾದ ಜಿತೇಶ್ ಮತ್ತು ನಿಜಾಮ್ ಎಂಬಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸ್ ತಂಡ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆ ಬಳಿಕ ಮತ್ತಷ್ಟು ಹೆಚ್ಚಿನ ವಿಚಾರಣೆಗಾಗಿ ಕೋರಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿಗಳಿಬ್ಬರನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಹನಿಟ್ರ್ಯಾಪ್ ಜಾಲದ ಸೂತ್ರಧಾರ ಬಂಧಿತ ನಿಜಾಮ್ ರಾಜಕೀಯವಾಗಿ ಸಾಕಷ್ಟು ಪ್ರಭಾವಶಾಲಿಯಾಗಿದ್ದರೂ ಮಂಗಳೂರು ಪೊಲೀಸರ ದಿಟ್ಟ ಕಾರ್ಯಾಚರಣೆ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.