ಕುಂದಾಪುರ : ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದಕೊಡಚಾದ್ರಿ ಬೆಟ್ಟದಿಂದ ಸುಮಾರು 500 ಅಡಿಗೂ ಎತ್ತರದಿಂದ ಹಾಲ್ಗೊರೆಯಂತೆ ಧುಮ್ಮಿಕ್ಕುವ ‘ಬೆಳ್ಳಲ್ ತೀರ್ಥ’ (ಗೋವಿಂದ ತೀರ್ಥ) ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ.
ಈ ರಮಣೀಯ ದೃಶ್ಯವನ್ನು ಕಣ್ಣುಂಬಿಕೊಳ್ಳಲು ಕಳೆದ ಕೆಲ ದಿನಗಳಿಂದ ದುರ್ಗಮ ಹಾದಿಯ ನಡುವೆಯೂ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಎತ್ತರದಿಂದ ಕಲ್ಲುಬಂಡೆಗಳ ನಡುವೆ ಕವಲು – ಕವಲಾಗಿ ಭೋರ್ಗರೆಯುತ್ತಿರುವ ಈ ಜಲಧಾರೆಯ ಸೊಬಗನ್ನು ಕಾಣುವುದೇ ಚೆಂದ.
ಕುಂದಾಪುರದಿಂದ ಸುಮಾರು 50 ಕಿ.ಮೀ., ಕೊಲ್ಲೂರಿನಿಂದ 15 ಕಿ.ಮೀ. ದೂರದಲ್ಲಿದೆ ಬೆಳ್ಳಲ್ ತೀರ್ಥ. ಹೆಮ್ಮಾಡಿ – ಕೊಲ್ಲೂರು ಮುಖ್ಯ ರಸ್ತೆಯ ಜಡಲ್ ತೆರಳಿ, ಅಲ್ಲಿಂದ ಮುದೂರಿಗೆ ತೆರಳುವ ರಸ್ತೆಯಲ್ಲಿ 8 ಕಿ.ಮೀ. ಸಾಗಬೇಕು. ಅಲ್ಲಿ ಮೈದಾನ ಎಂಬ ಊರಿದ್ದು ಅಲ್ಲಿಂದ ಸ್ವಲ್ಪ ದೂರದವರೆಗೆ ಮಾತ್ರ ವಾಹನ ಸಂಚಾರವಿದ್ದು ಮತ್ತೆ 4 ಕಿ.ಮೀ. ಕಾಡಿನಲ್ಲಿ ಕಾಲ್ನಡಿಗೆಯ ಮೂಲಕವೇ ತೆರಳಬೇಕು. ಸಿದ್ದಾಪುರ, ಹಳ್ಳಿಹೊಳೆ ಮಾರ್ಗವಾಗಿಯೂ ಬರಬಹುದು.500 ಅಡಿ ಎತ್ತರದಿಂದ ಧುಮ್ಮಿಕ್ಕುವ ಬೆಳ್ಳಲ್ ತೀರ್ಥ ಜಲಪಾತ.
ಈ ತೀರ್ಥಕ್ಕೆ ಪುರಾತನ ಹಿನ್ನೆಲೆ :
3-4ಕಿ.ಮೀ ದೂರದಲ್ಲಿ ವಿಶ್ವಂಭರ ಮಹಾಗಣಪತಿ, ಕೋಟಲಿಂಗೇಶ್ವರ, ಗೋವಿಂದ ದೇವರ ಸನ್ನಿಧಾನವಿದೆ. ಹಿಂದೆ ಈ ದೇಗುಲ ಜಲಪಾತದ ಸನಿಹದಲ್ಲಿಯೇ ಇದ್ದು ಅಲ್ಲಿಗೆ ಹೋಗುವ ದಾರಿ ದುರ್ಗಮ ಆಗಿದ್ದರಿಂದ ಇಲ್ಲಿ ಪ್ರತಿಷ್ಠಾಪಿಸಲಾಯಿತು. ಮೂಕಾಂಬಿಕೆಯು ಆಯುಧವನ್ನು ಈ ಬೆಳ್ಳಲ್ ತೀರ್ಥದಲ್ಲಿ ತೊಳೆದಳು ಅನ್ನುವ ಪ್ರತೀತಿಯೂ ಇದೆ. ಹಾಗಾಗಿ ಎಳ್ಳಮಾವಾಸ್ಯೆ ದಿನ ಇಲ್ಲಿ ತೀರ್ಥ ಸ್ನಾನ ಮಾಡಲು ಸಹಸ್ರಾರು ಮಂದಿ ಬರುತ್ತಾರೆ.
ಮುನ್ನೆಚ್ಚರಿಕೆ ಅಗತ್ಯ : ಶುಚಿತ್ವ ಕಾಪಾಡಿ ದುರ್ಗಮ ಹಾದಿಯಲ್ಲಿ ನಡೆದುಕೊಂಡು ಹೋಗುವಾಗ ಮುನ್ನೆಚ್ಚರಿಕೆ ಅಗತ್ಯ. ಜಲಪಾತದಲ್ಲಿಯೂ ನೀರಿನಲ್ಲಿ ಇಳಿಯುವಾಗ ಮುಂಜಾಗ್ರತೆ ಅಗತ್ಯ. ಕಲ್ಲುಬಂಡೆಗಳು ಪಾಚಿಗಟ್ಟಿ ಜಾರುತ್ತಿದ್ದು, ಮೋಜು ಮಸ್ತಿಯಲ್ಲಿ ಮೈಮರೆಯಬಾರದು.ಇಲ್ಲಿಗೆ ಬರುವ ಪ್ರವಾಸಿಗರು ಪ್ಲಾಸ್ಟಿಕ್, ನೀರಿನ ಬಾಟಲಿ, ಹಿಂಡಿಯ ವೊಟ್ಟಣಗಳು, ಒದ್ದೆಯಾದ ಬಟ್ಟೆ-ಬರೆಗಳನ್ನು ಇಲ್ಲಿ ಎಸೆದು ಶುಚಿತಕ್ಕೆ ಧಕ್ಕೆ ಉಂಟು ಮಾಡುತ್ತಿರುವುದು ಕಂಡು ಬರುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಿದೆ.


