ಕಾಸರಗೋಡು: ಕಾರಿನಲ್ಲಿ ಮಾರಕ ಮಾದಕ ವಸ್ತು ಹ್ಯಾಶಿಶ್ ಆಯಿಲ್ ಸಾಗಿಸಿದ ಪ್ರಕರಣದ ಎರಡನೇ ಅಪರಾಧಿ, ಕುಂಬಳೆ ಶೇಡಿಕಾವು ನಿವಾಸಿ ಎಂ.ಮಹಮ್ಮದ್ ಹನೀಫಾ(30) ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಅಪರಾಧಿ ಮೂರು ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.
ಪ್ರಕರಣದ ಮೊದಲ ಆರೋಪಿ, ಸೀತಾಂಗೋಳಿ ಎಕೆಜಿ ನಗರ ನಿವಾಸಿ ಫೈಸಲ್ (38) ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಪ್ರತ್ಯೇಕವಾಗಿ ನಡೆಸಿತ್ತು.