ಬೆಂಗಳೂರು : ಹೊಸೂರು ಬಳಿಯ ಬೆಂಗಳೂರು – ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಹೊಸೂರಿನಿಂದ ಕೃಷ್ಣಗಿರಿಗೆ ಪ್ರಯಾಣಿಸುತ್ತಿದ್ದ ಕಾರು, ಬೆಂಗಳೂರು – ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಪೆರಂಡಪಲ್ಲಿ ಅರಣ್ಯ ಪ್ರದೇಶದಲ್ಲಿ ಮುಂದೆ ಸಾಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ನಂತರ, ಅಪಘಾತಕ್ಕೀಡಾದ ಕಾರಿಗೆ ಪಿಕಪ್ ವ್ಯಾನ್ ಡಿಕ್ಕಿ ಹೊಡೆದಿದೆ. ಬಳಿಕ ಮತ್ತೊಂದು ಕಾರು, ಪಿಕಪ್ ವ್ಯಾನ್, ಲಾರಿ ಮತ್ತು ಕಾರಿಗೆ ಡಿಕ್ಕಿ ಹೊಡೆದಿದ್ದು, ಇದರಿಂದ ನಾಲ್ಕು ವಾಹನಗಳ ನಡುವೆ ಅಪಘಾತ ಸಂಭವಿಸಿದೆ.
ಈ ಅಪಘಾತದಲ್ಲಿ ಲಾರಿ ಮತ್ತು ಪಿಕಪ್ ವ್ಯಾನ್ ನಡುವೆ ಸಿಲುಕಿದ ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಕಾರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಹೊಸೂರು ATCO ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಸೇಲಂ ಜಿಲ್ಲೆಯ ಓಮಲೂರು ಪ್ರದೇಶದ ಮುಗಿಲನ್ (30) ಎಂದು ತಿಳಿದುಬಂದಿದೆ. ಇವರು ಬೆಂಗಳೂರಿನಲ್ಲಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಈ ಪ್ರಯಾಣದ ವೇಳೆ ಅವರೊಂದಿಗೆ ಸ್ನೇಹಿತರು ಇದ್ದರು ಎಂದು ತಿಳಿದುಬಂದಿದೆ.
ಈ ಅಪಘಾತದಿಂದಾಗಿ ಬೆಂಗಳೂರು – ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅಪಘಾತಕ್ಕೀಡಾದ ವಾಹನಗಳನ್ನು ಪೊಲೀಸರು ರಸ್ತೆಯಿಂದ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು ಎಂದು ಮಾಹಿತಿ ತಿಳಿದು ಬಂದಿದೆ.