ಪುತ್ತೂರು: ಕಬಕ ಗ್ರಾಮದ ಮುರ ಪ್ರದೇಶದಲ್ಲಿರುವ ರೈಲ್ವೇ ಸೇತುವೆ ಬಳಿ ವ್ಯಕ್ತಿಯೋರ್ವ ಮಾದಕವಸ್ತು ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆತನಿಂದ 10 ಗ್ರಾಂ ಎಂಡಿಎಂಎ ನಿಷೇಧಿತ ಮಾದಕವಸ್ತು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಪುತ್ತೂರು ಕಬಕ ನಿವಾಸಿ ಉಮ್ಮರ್ ಫಾರೂಕ್ (41) ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯ ಕಲಂ 8(C), 22(b) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರೈಲ್ವೇ ಸೇತುವೆ ಬಳಿ ವ್ಯಕ್ತಿಯೋರ್ವ ಮಾದಕವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿಯ ಮೇರೆಗೆ, ಪುತ್ತೂರು ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.
ಘಟನಾ ಸ್ಥಳದಲ್ಲಿ ಶಂಕಿತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಹಾಗೂ ಆತನ ದ್ವಿಚಕ್ರ ವಾಹನವನ್ನು ಪರಿಶೀಲಿಸಿದಾಗ, ಮಾರಾಟ ಉದ್ದೇಶಕ್ಕಾಗಿ ಅಕ್ರಮವಾಗಿ ಇಟ್ಟುಕೊಂಡಿದ್ದ 10 ಗ್ರಾಂ ಎಂಡಿಎಂಎ ನಿಷೇಧಿತ ಮಾದಕವಸ್ತು ಪತ್ತೆಯಾಗಿದೆ.
ಪ್ರಾಥಮಿಕ ವಿಚಾರಣೆ ವೇಳೆ ಆರೋಪಿಯ ವಿರುದ್ಧ ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ 6 ಬೇರೆ ಪ್ರಕರಣಗಳು ದಾಖಲಾಗಿರುವುದು ಬಹಿರಂಗವಾಗಿದೆ. ತನಿಖೆ ನಡೆಯುತ್ತಿದೆ.



