Home Dskshina Kannada ಹೃದಯಾಘಾತಕ್ಕೆ ಯುವ ಉದ್ಯಮಿ ಬಲಿ…!!

ಹೃದಯಾಘಾತಕ್ಕೆ ಯುವ ಉದ್ಯಮಿ ಬಲಿ…!!

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಕೊಪ್ಪಳಕೋಡಿ ನಿವಾಸಿ ಹಾಗೂ ಸೌತಡ್ಕ ದ್ವಾರದ ಸಮೀಪದ ನ್ಯೂ ರೋಹಿಣಿ ಜ್ಯೂಸ್ ಸೆಂಟರ್‌ನ ಮಾಲಕ ಧನಂಜಯ್ (36) ಅವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸಂಭವಿಸಿದೆ.

ಈ ವೇಳೆ ಸಕಾಲದಲ್ಲಿ ಆಂಬುಲೆನ್ಸ್ ಸೇವೆ ದೊರೆಯದ ಕಾರಣ ಅಮೂಲ್ಯ ಜೀವ ಬಲಿಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಜೂ. 5ರಂದು ರಾತ್ರಿ ಎಂದಿನಂತೆ ಕೆಲಸ ಮುಗಿಸಿ ಮನೆಗೆ ತೆರಳಿದ್ದ ಧನಂಜಯ್ ಅವರಿಗೆ ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಕುಟುಂಬಸ್ಥರು ಅವರನ್ನು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದು, ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.

ಆದರೆ ಆರೋಗ್ಯ ಕೇಂದ್ರದಲ್ಲಿ 108 ಆಂಬುಲೆನ್ಸ್ ಇದ್ದರೂ ಚಾಲಕರ ಕೊರತೆಯಿಂದ ಸೇವೆ ಲಭ್ಯವಾಗಲಿಲ್ಲ ಎಂದು ತಿಳಿದುಬಂದಿದೆ.

ಇದರಿಂದ ಕುಟುಂಬಸ್ಥರು ಹಾಗೂ ಸ್ಥಳೀಯರು ಧನಂಜಯ್ ಅವರನ್ನು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ತೀವ್ರ ಹೃದಯಾಘಾತ ಸಂಭವಿಸಿ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಸಹೋದರನನ್ನು ಅಗಲಿದ್ದಾರೆ.

ಘಟನೆಯ ಬಳಿಕ ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 108 ಆಂಬುಲೆನ್ಸ್ ಇದ್ದರೂ ತುರ್ತು ಸಂದರ್ಭಗಳಲ್ಲಿ ಸೇವೆ ದೊರೆಯದಿರುವ ಬಗ್ಗೆ ಕುಟುಂಬಸ್ಥರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಸಜ್ಜಿತ ಆರೋಗ್ಯ ಕೇಂದ್ರವಿದ್ದರೂ ಆಂಬುಲೆನ್ಸ್ ಸೇವೆ ಲಭ್ಯವಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

“ನಮ್ಮ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಕೊರತೆ ಇದೆ. 108 ಆಂಬುಲೆನ್ಸ್‌ಗೆ ಕೇವಲ ಒಬ್ಬ ಚಾಲಕರಿದ್ದು, ಅವರು ಸಾಮಾನ್ಯವಾಗಿ ಹಗಲು ಕರ್ತವ್ಯ ನಿರ್ವಹಿಸುತ್ತಾರೆ. ರಾತ್ರಿ ವೇಳೆಯ ತುರ್ತು ಕರೆಗಳಿಗೂ ಸ್ಪಂದಿಸುತ್ತಿದ್ದರು. ಆದರೆ ಘಟನೆ ನಡೆದ ದಿನ ಅವರು ರಜೆಯಲ್ಲಿದ್ದ ಕಾರಣ ಆಂಬುಲೆನ್ಸ್ ಸೇವೆ ಒದಗಿಸಲು ಸಾಧ್ಯವಾಗಲಿಲ್ಲ” ಎಂದು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ತುಷಾರ ತಿಳಿಸಿದ್ದಾರೆ.