Home Crime ಟ್ರೇಡಿಂಗ್ ಆ್ಯಪ್ ಹೆಸರಿನಲ್ಲಿ 11.75 ಲಕ್ಷ ರೂಪಾಯಿ ವಂಚನೆ..!

ಟ್ರೇಡಿಂಗ್ ಆ್ಯಪ್ ಹೆಸರಿನಲ್ಲಿ 11.75 ಲಕ್ಷ ರೂಪಾಯಿ ವಂಚನೆ..!

ಉಡುಪಿ: ಟ್ರೇಡಿಂಗ್ ಆ್ಯಪ್‌ನಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ಮಹಿಳೆಯೊಬ್ಬರಿಂದ 11.75 ಲಕ್ಷ ರೂಪಾಯಿ ಆನ್‌ಲೈನ್ ಮೂಲಕ ವಂಚನೆ ನಡೆಸಿದ ಪ್ರಕರಣ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಟ್ರೇಡಿಂಗ್ ಕುರಿತು ತಿಳಿದುಕೊಳ್ಳುವ ಉದ್ದೇಶದಿಂದ ಸಹನಾ, ಒಂದು ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು.

ಸುಮಾರು 15 ದಿನಗಳ ಬಳಿಕ ಅಪರಿಚಿತ ವ್ಯಕ್ತಿ ಕರೆ ಮಾಡಿ ಅವರನ್ನು ವಾಟ್ಸಾಪ್ ಗುಂಪಿಗೆ ಸೇರಿಸಿದ್ದಾನೆ. ಆ ಗುಂಪಿನಲ್ಲಿ ಲಿಂಕ್ ಕಳುಹಿಸಿ, ಕೆವೈಸಿ ವಿವರಗಳನ್ನು ಭರ್ತಿ ಮಾಡಲು ಸೂಚಿಸಲಾಗಿದೆ. ಬಳಿಕ ಟ್ರೇಡಿಂಗ್ ಮೂಲಕ ಲಾಭ ದೊರೆಯುತ್ತದೆ ಎಂದು ನಂಬಿಸಿ, ಆರೋಪಿಗಳು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಸಹನಾ ಅವರು ಮಾರ್ಚ್ 6ರಿಂದ 14ರವರೆಗೆ ಹಂತ ಹಂತವಾಗಿ ಒಟ್ಟು 11,75,000 ರೂಪಾಯಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆದರೆ ಹಣ ವರ್ಗಾವಣೆ ಮಾಡಿದ ಬಳಿಕ ಆರೋಪಿಗಳು ಯಾವುದೇ ಲಾಭಾಂಶ ನೀಡದೇ, ಹೂಡಿಕೆ ಮಾಡಿದ ಹಣವನ್ನೂ ಹಿಂತಿರುಗಿಸದೇ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.