Home Latest ಹಿರಿಯ ಪತ್ರಕರ್ತ ಜನಾರ್ದನ ಎಸ್.ಮರವಂತೆ ನಿಧನ

ಹಿರಿಯ ಪತ್ರಕರ್ತ ಜನಾರ್ದನ ಎಸ್.ಮರವಂತೆ ನಿಧನ

ಉಡುಪಿ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಬೈಂದೂರು ತಾಲೂಕು ಘಟಕದ ಮಾಜಿ ಅಧ್ಯಕ್ಷರಾಗಿದ್ದ ಹಿರಿಯ ಪತ್ರಕರ್ತ ಜನಾರ್ದನ ಎಸ್.ಮರವಂತೆ ನಿಧನರಾಗಿದ್ದು, ಅವರ ನಿಧನಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಮರವಂತೆಯ ಎಸ್. ಜನಾರ್ದನ ಅವರು ಶಿಕ್ಷಣ, ಸಮುದಾಯಾಭಿವೃದ್ಧಿ ಹಾಗೂ ಸ್ಥಳೀಯಾಡಳಿತ ಕ್ಷೇತ್ರಗಳಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ವಿಶಿಷ್ಟ ಗುರುತನ್ನು ಪಡೆದಿದ್ದಾರೆ.

ರಾಜ್ಯಶಾಸ್ತ್ರ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಶಿಕ್ಷಣದಲ್ಲಿ ಸ್ನಾತಕ ಪದವಿ ಹಾಗೂ ಹೈದರಾಬಾದ್‌ನ ಕೇಂದ್ರೀಯ ಆಂಗ್ಲ ಮತ್ತು ವಿದೇಶಿ ಭಾಷೆಗಳ ಸಂಸ್ಥೆಯಿಂದ ಆಂಗ್ಲ ಭಾಷಾ ಬೋಧನೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ.

ಅವರು ಖಂಬದಕೋಣೆ, ಕುಂದಾಪುರ, ಬೈಂದೂರು ಹಾಗೂ ಶಂಕರನಾರಾಯಣದಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ, ಚಿಕ್ಕಮಗಳೂರಿನ ಸಖರಾಯಪಟ್ಟಣ ಮತ್ತು ನಾವುಂದದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 1979ರಲ್ಲಿ ನಿವೃತ್ತರಾದರು. ಶಿಕ್ಷಕ ವೃತ್ತಿಯ ಅವಧಿಯಲ್ಲಿ ಶಾಲೆಗಳ ಅಭಿವೃದ್ಧಿ ಹಾಗೂ “ಶಾಲಾ ಸಮುದಾಯ” ಪರಿಕಲ್ಪನೆಯ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದರು. ಅವರ ಶೈಕ್ಷಣಿಕ ಪ್ರಯೋಗಕ್ಕೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿತು. ಮಂಗಳೂರು ಆಕಾಶವಾಣಿಯಲ್ಲಿ ಆಂಗ್ಲ ಭಾಷೆಯ ರೇಡಿಯೋ ಪಾಠಗಳನ್ನು ಸಹ ನಿರೂಪಿಸಿದ್ದಾರೆ.

ಶಿಕ್ಷಕ ವೃತ್ತಿಯ ಜೊತೆಗೆ ಮರವಂತೆ ಗ್ರಾಮದ ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಂಡ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಮತ್ತು ಸರ್ಕಾರಿ ಪ್ರೌಢಶಾಲೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. “ಸಾಧನಾ ಸಮಾಜ ಸೇವಾ ವೇದಿಕೆ”ಯನ್ನು ಸ್ಥಾಪಿಸಿ ಕಳೆದ ನಾಲ್ಕು ದಶಕಗಳಿಂದ ಶಿಕ್ಷಣ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ನಾಯಕತ್ವ ನೀಡುತ್ತಿದ್ದಾರೆ.

ನಿವೃತ್ತಿಯ ನಂತರ 15 ವರ್ಷಗಳ ಕಾಲ ಮರವಂತೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಹಾಗೂ ಎರಡು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಅವರ ನೇತೃತ್ವದಲ್ಲಿ ಪಂಚಾಯಿತಿಗೆ ಎರಡು ರಾಷ್ಟ್ರೀಯ, ಒಂದು ರಾಜ್ಯ ಮತ್ತು ಒಂದು ಜಿಲ್ಲಾ ಮಟ್ಟದ ಪ್ರಶಸ್ತಿ ದೊರೆಯಿತು. ಪ್ರಶಸ್ತಿಗಳೊಂದಿಗೆ ಸುಮಾರು 25 ಲಕ್ಷ ರೂ. ನಗದು ಪುರಸ್ಕಾರವೂ ಲಭಿಸಿತು. ಈ ಸಾಧನೆಗಳ ಹಿನ್ನೆಲೆಯಲ್ಲಿ ಮರವಂತೆ ರಾಜ್ಯದ ಮಾದರಿ ಗ್ರಾಮ ಪಂಚಾಯಿತಿಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಎಸ್. ಜನಾರ್ದನ ಅವರು ಪಂಚಾಯತ್‌ರಾಜ್ ವಿಷಯ ಪರಿಣಿತರಾಗಿ ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದಾರೆ. ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಆಡಳಿತ ತರಬೇತಿ ಸಂಸ್ಥೆ, ಕುವೆಂಪು ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ, ರಾಜೀವ್ ಗಾಂಧಿ ರಾಷ್ಟ್ರೀಯ ಯುವಜನ ಅಭಿವೃದ್ಧಿ ಸಂಸ್ಥೆ, ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿ, ತರಬೇತಿದಾರ ಹಾಗೂ ಪಠ್ಯಕ್ರಮ ರಚನೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2008ರಲ್ಲಿ ಕೊಲ್ಕತ್ತಾದಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

ಅವರು ಲೇಖಕ ಹಾಗೂ ಪತ್ರಕರ್ತರಾಗಿಯೂ ಗುರುತಿಸಿಕೊಂಡಿದ್ದಾರೆ. ಸುಮಾರು 25 ವರ್ಷಗಳ ಕಾಲ ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಗಳ ಅರೆಕಾಲಿಕ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದು, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. “ಜನಾಧಿಕಾರ” ಎಂಬ ಗ್ರಾಮ ಪಂಚಾಯಿತಿಗಳಿಗೆ ಮಾರ್ಗದರ್ಶಕ ಗ್ರಂಥವನ್ನು ರಚಿಸಿದ್ದು, ಅದು ನಾಲ್ಕು ಮುದ್ರಣಗಳನ್ನು ಕಂಡಿದೆ. ಜರ್ಮನಿಯಲ್ಲಿ ಪ್ರಕಟವಾದ Some Reflections on Rural India ಕೃತಿಯಲ್ಲಿ “Real Heroes of Rural India” ಶೀರ್ಷಿಕೆಯಡಿ ಅವರ ಸಾಧನೆಗಳನ್ನು ದಾಖಲಿಸಲಾಗಿದೆ.

ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್, ಶಿಕ್ಷಣ ಮತ್ತು ಸಾಮಾಜಿಕ ಸೇವೆ ಕ್ಷೇತ್ರಗಳಲ್ಲಿನ ಅಪಾರ ಕೊಡುಗೆಗಾಗಿ ಅವರಿಗೆ 2013ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2019ರ ಸದಾನಂದ ಪ್ರಶಸ್ತಿ ಹಾಗೂ 2021ರ “ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿ” ಸೇರಿದಂತೆ ಅನೇಕ ಗೌರವಗಳು ಲಭಿಸಿವೆ. ತಮ್ಮ ಜೀವನವನ್ನೇ ಸಮಾಜ ಸೇವೆಗೆ ಅರ್ಪಿಸಿದ ಎಸ್. ಜನಾರ್ದನ ಅವರು ಗ್ರಾಮೀಣಾಭಿವೃದ್ಧಿಯ ಕ್ಷೇತ್ರದಲ್ಲಿ ಮಾದರಿ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದಾರೆ.