ಮಲ್ಪೆ: ಬಾವಿಗೆ ಬಿದ್ದು ರಕ್ಷಿಸಲ್ಪಟ್ಟಿದ್ದ ದಂಪತಿಗಳಲ್ಲಿ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಪಡುತೋನ್ಸೆ ಗ್ರಾಮದ ಶ್ಯಾಮಲ ಜಿ. ಹೆಗ್ಡೆ (68) ಅವರು ಜೂನ್ 3ರಂದು ಮನೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಬಾವಿಯ ಮೇಲಿನ ಬಲೆಯ ಮೇಲೆ ಬಿದ್ದಿದ್ದ ಕಸವನ್ನು ತೆರವುಗೊಳಿಸಲು ಹೋಗಿದ್ದಾರೆ. ಈ ವೇಳೆ ಕಾಲು ಜಾರಿ ತಲೆಕೆಳಗಾಗಿ ಬಾವಿಯ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಪತ್ನಿಯ ಕೂಗು ಕೇಳಿ ರಕ್ಷಿಸಲು ಧಾವಿಸಿದ ಅವರ ಪತಿ ಹಗ್ಗದ ಸಹಾಯದಿಂದ ಬಾವಿಯೊಳಗೆ ಇಳಿಯಲು ಯತ್ನಿಸಿದ್ದು, ಹಗ್ಗ ತುಂಡಾದ ಪರಿಣಾಮ ಅವರೂ ಬಾವಿಗೆ ಬಿದ್ದಿದ್ದಾರೆ. ಸ್ಥಳೀಯರು ತಕ್ಷಣ ಇಬ್ಬರನ್ನೂ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಚಿಕಿತ್ಸೆ ವೇಳೆ ಪತಿ ಗುಣಮುಖರಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಶ್ಯಾಮಲ ಹೆಗ್ಡೆ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




