ದಾವಣಗೆರೆ : ಕೌಟುಂಬಿಕ ವಿಚಾರವಾಗಿ ಪದೇಪದೇ ಜಗಳವಾಡುತ್ತಿದ್ದ ಪತ್ನಿಯೊಬ್ಬಳು, ನಿದ್ದೆಯಲ್ಲಿದ್ದ ಪತಿಯ ತಲೆಗೆ ಕೊಡಲಿಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದ ಪ್ರಕರಣ ಸಂಬಂಧ ಆರೋಪಿಗೆ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಜೈಲು ಶಿಕ್ಷೆ ಹಾಗೂ 50ಸಾ. ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಶಿಕ್ಷೆಗೊಳಗಾದ ಅಪರಾಧಿ ಚನ್ನಗಿರಿ ತಾಲೂಕಿನ ಚಿಕ್ಕಕೋಗಲೂರು ಗ್ರಾಮದ ರೇಖಾ (36) ಎಂದು ತಿಳಿದು ಬಂದಿದೆ.
ಕೊಲೆಯಾದ ವ್ಯಕ್ತಿ ಶಾಂತಕುಮಾರ್ ಎಂದು ತಿಳಿದು ಬಂದಿದೆ.
ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮದ ರೇಖಾ ಹಾಗೂ ಶಾಂತಕುಮಾರ್ ಅವರ ಮದುವೆ 16 ವರ್ಷಗಳ ಹಿಂದೆ ನಡೆದಿತ್ತು. ದಂಪತಿ ಅನ್ನೋನ್ಯವಾಗಿದ್ದರೂ, ಆಗಾಗ್ಗೆ ಕೌಟುಂಬಿಕ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
2023 ರ ಮಾರ್ಚ್ 21ರಂದು ರಾತ್ರಿ ಶಾಂತಕುಮಾರ್ ಮಲಗಿದ್ದ ವೇಳೆ, ಕೊಲೆ ಮಾಡುವ ಉದ್ದೇಶದಿಂದ ರೇಖಾಳು ಕೊಡಲಿಯಿಂದ ತಲೆಗೆ ತೀವ್ರವಾಗಿ ಹಲ್ಲೆ ನಡೆಸಿದ್ದಳು. ರಕ್ತದ ಮಡುವಿನಲ್ಲಿದ್ದ ಶಾಂತಕುಮಾರನನ್ನು ಸಂತೆಬೆನ್ನೂರು ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 25, 2023 ರಂದು ಶಾಂತಕುಮಾರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಈ ಕುರಿತು ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನದಡಿ ದಾಖಲಾಗಿದ್ದ ಪ್ರಕರಣವು, ಪತಿ ಮೃತಪಟ್ಟ ಹಿನ್ನೆಲೆಯಲ್ಲಿ ಕೊಲೆ ಪ್ರಕರಣಕ್ಕೆ ಬದಲಾವಣೆಗೊಂಡಿತ್ತು.
ಪ್ರಕರಣದ ತನಿಖೆ ಕೈಗೊಂಡ ಸಂತೆಬೆನ್ನೂರು ವೃತ್ತದ ಸಿಪಿಐ ಲಿಂಗನಗೌಡ ನೆಗಳೂರು ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೃಷ್ಣಮೂರ್ತಿ ಆರ್. ಪಡಸಲಗಿ ಅವರು ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಕ್ಟೋಬರ್ 19, 2026 ರಂದು ತೀರ್ಪು ಪ್ರಕಟಿಸಿದ್ದಾರೆ ಎಂದು ತಿಳಿದು ಬಂದಿದೆ.



