Home Crime 36 ವರ್ಷಗಳ ಬಳಿಕ ಉಡುಪಿ ನಗರ ಠಾಣೆ ಪ್ರಕರಣದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

36 ವರ್ಷಗಳ ಬಳಿಕ ಉಡುಪಿ ನಗರ ಠಾಣೆ ಪ್ರಕರಣದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಉಡುಪಿ, ಜೂನ್ 23: ಸುಮಾರು 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಡುಪಿ ನಗರ ಪೊಲೀಸ್ ಠಾಣೆಯ ಪ್ರಕರಣವೊಂದರ ಎಲ್‌ಪಿಸಿ (LPC) ವಾರಂಟ್ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

1990ರ ಜೂನ್ 21ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅರಣ್ಯ ಕಾಯ್ದೆಯ ಕಲಂ 86 ಮತ್ತು 87ರಡಿ ದಾಖಲಾಗಿದ್ದ ಪ್ರಕರಣದಲ್ಲಿ ನೂರುಲ್ಲ (66), ಭಾಷಾ ಸಾಹೇಬ್ ಅವರ ಪುತ್ರ, ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ನಿಟ್ಟೂರು ನಿವಾಸಿ, ಆರೋಪಿಯಾಗಿದ್ದ. ಅವರನ್ನು 1990ರ ಜೂನ್ 22ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜುಲೈ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ಆರೋಪಿ, ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದರಿಂದ, ನ್ಯಾಯಾಲಯವು 1998ರಲ್ಲಿ ಅವರ ವಿರುದ್ಧ ಎಲ್‌ಪಿಸಿ ವಾರಂಟ್ ಹೊರಡಿಸಿತ್ತು.

ಈ ಹಿನ್ನೆಲೆಯಲ್ಲಿ ಉಡುಪಿ ನಗರ ಠಾಣೆಯ ಪ್ರಭಾರ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಭರತೇಶ ಕಂಕಣವಾಡಿ, ಈರಣ್ಣ ಶಿರಗುಂಪಿ ಹಾಗೂ ರತ್ನಾಕರ ಕೆ. ಅವರ ನೇತೃತ್ವದ ವಿಶೇಷ ತಂಡವು ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿತು.

ತಂಡವು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ನಿಟ್ಟೂರಿನಲ್ಲಿ ಅಡಗಿದ್ದ ಆರೋಪಿಯನ್ನು 2026ರ ಜೂನ್ 22ರಂದು ಪತ್ತೆಹಚ್ಚಿ ವಶಕ್ಕೆ ಪಡೆದು, ವಾರಂಟ್‌ನೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಿತು. ನ್ಯಾಯಾಲಯವು ಆರೋಪಿಗೆ ಮತ್ತೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧನ ಕಾರ್ಯಾಚರಣೆಯಲ್ಲಿ ಹೆಡ್ ಕಾನ್ಸ್ಟೇಬಲ್‌ಗಳಾದ ಪ್ರಸನ್ನ ಸಿ., ಜೀವನ್ ಕುಮಾರ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಹೇಮಂತ್ ಕುಮಾರ್ ಭಾಗವಹಿಸಿದ್ದರು.