ಕಾಪು: 25 ವರ್ಷಗಳ ವೈವಾಹಿಕ ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ತಮ್ಮ ಗಂಡ ಹಾಗೂ ನಾದಿನಿ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉದ್ಯಾವರ ನಿವಾಸಿ ಫಿರ್ದೋಸ್ ಬಾನು (44) ಅವರು ನೀಡಿದ ದೂರಿನ ಪ್ರಕಾರ, 2000ರಲ್ಲಿ ಮೊಹಮ್ಮದ್ ಆದಿಲ್ ಅವರೊಂದಿಗೆ ವಿವಾಹವಾಗಿದ್ದು, ಮದುವೆಯ ಆರಂಭದ ದಿನಗಳಿಂದಲೇ ಅತ್ತೆ ಹಾಗೂ ನಾದಿನಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಬಳಿಕ ಮನೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ನಾದಿನಿ ಪೌಜಿಯಾ ಬೇಗಂ ಅವರು ಜಗಳದ ವೇಳೆ ಚೂರಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಇದಲ್ಲದೆ ಗಂಡ ಹಾಗೂ ನಾದಿನಿ ಸೇರಿಕೊಂಡು ಅಕ್ರಮವಾಗಿ ಬಂಧನದಲ್ಲಿಟ್ಟು ಹಿಂಸೆ ನೀಡಿದ್ದು, ಮೊಬೈಲ್ ಕಸಿದು ಅದರಲ್ಲಿದ್ದ ಮಾಹಿತಿಯನ್ನು ಅಳಿಸಿ ಹಾಕಿರುವುದಾಗಿ ಹಾಗೂ ಪ್ರಶ್ನಿಸಿದಾಗ ಹಲ್ಲೆ ನಡೆಸಿ ಮನೆ ಬಿಟ್ಟು ಹೋಗುವಂತೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮದುವೆ ವೇಳೆ ನೀಡಲಾಗಿದ್ದ 40 ಪವನ್ ಚಿನ್ನಾಭರಣಗಳನ್ನು ತಮ್ಮ ಸ್ವಂತ ಬಳಕೆಗೆ ಬಳಸಿಕೊಂಡಿರುವ ಆರೋಪವೂ ದೂರಿನಲ್ಲಿ ಮಾಡಲಾಗಿದೆ.
ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಮೊಹಮ್ಮದ್ ಆದಿಲ್ ಹಾಗೂ ಪೌಜಿಯಾ ಬೇಗಂ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




