Home Crime ಬೆಳ್ತಂಗಡಿ : ಕೋಳಿ ಅಂಕಕ್ಕೆ ಪೊಲೀಸ್ ದಾಳಿ : ನಾಲ್ವರು ವಶಕ್ಕೆ…!!

ಬೆಳ್ತಂಗಡಿ : ಕೋಳಿ ಅಂಕಕ್ಕೆ ಪೊಲೀಸ್ ದಾಳಿ : ನಾಲ್ವರು ವಶಕ್ಕೆ…!!

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮದ ಕಾಣಲಚ್ಚಿ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ವೇಣೂರು ಪೊಲೀಸರು ದಿಢೀರ್ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರು ವಶಕ್ಕೆ ಪಡೆದ ಆರೋಪಿಗಳು ಮೋಹನ ಗೌಡ (45), ದಿನೇಶ್ (45), ಪ್ರಶಾಂತ್ (35) ಹಾಗೂ ಧೀರಜ್ ಎಂದು ತಿಳಿದು ಬಂದಿದೆ.

ಅ.18ರಂದು ಮಧ್ಯಾಹ್ನ ಅಂಡಿಂಜೆಯ ಕಾಣಲಚ್ಚಿ ಭಾಗದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಯ ಪಿಎಸ್‌ಐ ಅಕ್ಷಯ ಡವಗಿ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು.

ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರ ತಂಡ ಸ್ಥಳಕ್ಕೆ ದಾಳಿ ನಡೆಸಿದಾಗ ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ ಆಡಿಸುತ್ತಿರುವುದು ದೃಢಪಟ್ಟಿದೆ.

ಪೊಲೀಸರು ದಾಳಿ ನಡೆಸುತ್ತಿದ್ದಂತೆ ಹಲವರು ಸ್ಥಳದಿಂದ ಪರಾರಿಯಾಗಿದ್ದು, ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ದಾಳಿ ಸಂದರ್ಭ ಸ್ಥಳದಲ್ಲಿದ್ದ 7 ಅಂಕದ ಕೋಳಿಗಳು, 3 ದ್ವಿಚಕ್ರ ವಾಹನಗಳು ಹಾಗೂ ಒಂದು ಆಟೋರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.