ಮಂಗಳೂರು: ನಗರದ ಕೊಡಿಯಾಲಬೈಲ್‌ನ ಟಿ.ಎಂ.ಎ. ಪೈ ಹಾಲ್‌ನಲ್ಲಿ ನಡೆದ ಕುಟುಂಬದ ವಿವಾಹ ಸಮಾರಂಭದಲ್ಲಿ ಮೂರುವರೆ ವರ್ಷದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅಪರಿಚಿತ ಮಹಿಳೆಯೊಬ್ಬರು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಅಕ್ಟೋಬರ್ 18ರಂದು ಬೆಳಿಗ್ಗೆ ಸೀಮಾ ಬಾನು ಅವರು ತಮ್ಮ ಮಗಳು ಶಾಝ್ಮ (3 ವರ್ಷ 6 ತಿಂಗಳು) ಜೊತೆ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಾಲ್‌ಗೆ ಆಗಮಿಸಿದ್ದರು.
ಮಧ್ಯಾಹ್ನ ಸುಮಾರು 2:15ರ ವೇಳೆಗೆ ಹಾಲ್‌ನ ಮೊದಲ ಮಹಡಿಯಲ್ಲಿರುವ ಆಹಾರ ವಿತರಣಾ ಸ್ಥಳದಲ್ಲಿ ಐಸ್‌ಕ್ರೀಂ ಪಡೆಯಲು ಹೋದ ಮಗು, ಸ್ವಲ್ಪ ಹೊತ್ತಿನ ಬಳಿಕ ಅಳುತ್ತಾ ತಾಯಿಯ ಬಳಿ ಮರಳಿದೆ. ಈ ವೇಳೆ ಅಪರಿಚಿತ ಮಹಿಳೆಯೊಬ್ಬರು ತನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡು ಹೋಗಿರುವುದಾಗಿ ಮಗುವು ತಿಳಿಸಿದೆ.
ತಕ್ಷಣ ತಾಯಿ ಹಾಗೂ ಸ್ಥಳದಲ್ಲಿದ್ದವರು ಮಹಿಳೆಗಾಗಿ ಹುಡುಕಾಟ ನಡೆಸಿದರೂ ಆಕೆ ಪತ್ತೆಯಾಗಲಿಲ್ಲ. ಬಳಿಕ ಹಾಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಪರಿಚಿತ ಮಹಿಳೆಯೊಬ್ಬರು ಮಗುವಿನ ಕುತ್ತಿಗೆಯಿಂದ ಚಿನ್ನದ ಸರವನ್ನು ಕಿತ್ತುಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳುವಾದ ಚಿನ್ನದ ಸರವು ಸುಮಾರು 10 ಗ್ರಾಂ ತೂಕದ ಪೆಂಡೆಂಟ್ ಹೊಂದಿದ್ದು, ಅಂದಾಜು ₹1.35 ಲಕ್ಷ ಮೌಲ್ಯದ್ದಾಗಿದೆ. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿತ ಮಹಿಳೆಯನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.



