ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರದ ವಕ್ವಾಡಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಬಳಿಕ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಸೆಪ್ಟೆಂಬರ್ 16ರಂದು ರಾತ್ರಿ 8.45ರ ಸುಮಾರಿಗೆ ವಕ್ವಾಡಿ ಪೇಟೆ ಹಾಗೂ ರಂಗಮಂಟಪದ ಬಳಿ ಘಟನೆ ನಡೆದಿದೆ ಎನ್ನಲಾಗಿದೆ.
ಮೊದಲ ಪ್ರಕರಣದಲ್ಲಿ, ಬೀಜಾಡಿಯ ಸುದರ್ಶನ್ (25) ಎಂಬವರು ಗಣೇಶ ವಿಸರ್ಜನೆ ಮೆರವಣಿಗೆ ಮುಗಿಸಿ ತೆರಳುತ್ತಿದ್ದ ವೇಳೆ ಆಸೀಫ್, ರಮೇಶ್ ಶೆಟ್ಟಿ ಹಾಗೂ ಇತರ ಇಬ್ಬರು ತಮ್ಮನ್ನು ತಡೆದು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ವೇಳೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು, ಕೈಯಿಂದ ಹಲ್ಲೆ ಮಾಡಿ, ಟಿ-ಶರ್ಟ್ ಹರಿದು ನೆಲಕ್ಕೆ ದೂಡಿ ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಎರಡನೇ ಪ್ರಕರಣದಲ್ಲಿ, ವಕ್ವಾಡಿಯ ಆಸೀಫ್ (36) ಅವರು ತಮ್ಮ ಸ್ನೇಹಿತನೊಂದಿಗೆ ರಂಗಮಂಟಪದ ಬಳಿ ಮಾತನಾಡುತ್ತಿದ್ದಾಗ ಆದರ್ಶ ಪೂಜಾರಿ, ಎಡ್ವರ್ಡ್ ಡಿ ಮೆಲ್ಲೋ, ಇಲಿಯಾಸ್ ಹಾಗೂ ಸುದರ್ಶನ್ ತಮ್ಮನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪಿಗಳ ಪೈಕಿ ಓರ್ವ ಬಿಯರ್ ಬಾಟಲಿಯಿಂದ ತಲೆಗೆ ಹೊಡೆಯಲು ಯತ್ನಿಸಿದಾಗ ತಪ್ಪಿಸಿಕೊಳ್ಳಲು ಕೈ ಎತ್ತಿದ್ದು, ಬಾಟಲಿಯ ಚೂಪಾದ ಭಾಗ ಬಲಕೈಗೆ ತಾಗಿ ಆಳವಾದ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗಾಯಗೊಂಡ ಆಸೀಫ್ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆ, ಬಳಿಕ ಉಡುಪಿ ಸರ್ಕಾರಿ ಆಸ್ಪತ್ರೆ ಹಾಗೂ ನಂತರ ಮಣಿಪಾಲದ KMC ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



