ಉಡುಪಿ :ಒಳಕಾಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನೂತನವಾಗಿ ಆರಂಭಗೊಂಡ ಎಲ್. ಕೆ. ಜಿ. ತರಗತಿಯನ್ನು ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಆಂಗ್ಲ ಮಾಧ್ಯಮ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಎಲ್. ಕೆ. ಜಿ. ತರಗತಿಯನ್ನು ಆರಂಭಿಸಲಾಗಿದ್ದು, ಈ ಮೂಲಕ ಖಾಸಗಿ ಶಾಲೆಗೆ ಸರಿಸಮನಾಗಿ ಗುಣಮಟ್ಟದ ಶಿಕ್ಷಣ ಪ್ರಾಥಮಿಕ ಶಾಲೆಯಲ್ಲಿಯೇ ನೀಡಲು ಸಾಧ್ಯವಾಗಲಿದೆ ಎಂದರು.
ಶಾಲೆಯ ಹಳೆ ವಿದ್ಯಾರ್ಥಿ ಶ್ರೀ ಐ ಪಾಂಡುರಂಗ ಮಿತ್ತಂತಾಯ, ಮುಖ್ಯ ಪ್ರಧಾನ ವ್ಯವಸ್ಥಾಪಕರು, ಕೆನರಾ ಬ್ಯಾಂಕ್, ಖಜಾನೆ ಕಚೇರಿ ಮುಂಬೈ ಇವರ ವಿಶೇಷ ಶಿಫಾರಸಿನ ಅಡಿ ಮಂಜೂರಾದ ಕೆನರಾ ಬ್ಯಾಂಕ್ ಸಿ. ಎಸ್. ಆರ್. ಅನುದಾನದಲ್ಲಿ ಎಲ್. ಕೆ. ಜಿ ತರಗತಿಗಳಿಗೆ ಮರದ ಪೀಠೋಪಕರಣಗಳನ್ನು ಬ್ಯಾಂಕ್ ವತಿಯಿಂದ ನೀಡಿದ್ದನ್ನು ಈ ಸಮಯದಲ್ಲಿ ಶಾಸಕರು ಸ್ಮರಿಸಿಕೊಂಡರು. ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಪ್ರಧಾನ ವ್ಯವಸ್ಥಾಪಕ ಶ್ರೀ ಎಚ್. ಕೆ. ಗಂಗಾಧರ ರವರಿಗೆ ಶಾಸಕ ಯಶ್ ಪಾಲ್ ಸುವರ್ಣ ಅಭಿನಂದನೆ ಸಲ್ಲಿಸಿದರು.
ಸಮಾರಂಭದಲ್ಲಿ ಕೆನರಾ ಬ್ಯಾಂಕಿನ ಡಿಜಿಎಂ ಮಹಾಮಾಯ ಪ್ರಸಾದ್ ರಾಯ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಡಾ. ವಿರೂಪಾಕ್ಷ ( ಪ್ರಾಥಮಿಕ), ಶ್ರೀ ರಮೇಶ್ ಹೆಗ್ಡೆ (ಪ್ರೌಢ ಶಾಲೆ), ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಗಣೇಶ್ ಶೇಟ್, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪೂರ್ಣಿಮಾ, ಪ್ರೌಢ ಶಾಲೆಯ ಶ್ರೀಮತಿ ಕುಸುಮ, ಸಮಿತಿಯ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




