ಮಂಗಳೂರು : ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಎಂ.ಎ. ಗಫೂರ್ ಅವರು ಸೋಮವಾರ ಕುದ್ಮುಲ್ ರಂಗರಾವ್ ಮಿನಿ ಪುರಭವನದಲ್ಲಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ರಾಜ್ಯ ಸರಕಾರವು ಐದು ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರ ಬದುಕಿನ ಅಭಿವೃದ್ಧಿಗೆ ಮೈಲುಗಲ್ಲು ಹಾಕಿದೆ. ಇದೇ ರೀತಿ ತಲಪಾಡಿಯಿಂದ ಕಾರವಾರದವರೆಗಿನ 350 ಕಿ.ಮೀ. ವ್ಯಾಪಿಯ ಕರಾವಳಿಯ ಅಭಿವೃದ್ಧಿಗೆ ಪೂರಕವಾಗಿ ತನಗೆ ನೀಡಿರುವ ಜವಾಬ್ಧಾರಿಯನ್ನು ನಿಭಾಯಿಸುವುದಾಗಿ ಹೇಳಿದರು.
ರಾಜ್ಯ ಸರಕಾರವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಅಭಿವೃದ್ಧಿ ಮಂಡಳಿಯಾಗಿ ಶಾಸನ ಮಾಡಿ ಅಧಿಕಾರ ನೀಡಿದೆ. ಇದೀಗ ಅಗತ್ಯ ನೀತಿ ನಿಯಮಗಳ ಜಾರಿಯೊಂದಿಗೆ ಮಂಡಳಿ ಕಾರ್ಯ ನಿರ್ವಹಿಸಲಿದೆ. ಕರಾವಳಿ ಜಿಲ್ಲೆಗಳ ಹಿಂದಿನ ಎಲ್ಲಾ ಉಸ್ತುವಾರಿ ಸಚಿವರ ಜತೆಗೆ ಹಾಲಿ ಸಚಿವರ ಮಾರ್ಗದರ್ಶನ, ಸಲಹೆಯೊಂದಿಗೆ ಮಾಸ್ಟರ್ ಪ್ಲಾನ್ ರೂಪಿಸಿಕೊಂಡು ಕರಾವಳಿಯ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವುದಾಗಿ ಎಂ.ಎ. ಗಫೂರ್ ಭರವಸೆ ನೀಡಿದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಡಿಸೋಜಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಪದಗ್ರಹಣ ಸಮಾರಂಭದಲ್ಲಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ರಮಾನಾಥ ರೈ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಾಜಿ ಶಾಸಕ ಜೆ.ಆರ್. ಲೋಬೋ, ಮುಖಂಡರಾದ ಜಯಪ್ರಕಾಶ್ ಹೆಗ್ಡೆ, ಪದ್ಮರಾಜ್, ಚೇತನ್ ಬೆಂಗ್ರೆ, ಶಾಲೆಟ್ ಪಿಂಟೋ, ಲಾವಣ್ಯ ಬಳ್ಳಾಲ್, ಪ್ರತಿಭಾ ಕುಳಾಯಿ, ಟಿ.ಎಂ. ಶಾಹೀದ್, ವಿಶ್ವಾಸ್‌ಕುಮಾರ್ ದಾಸ್, ಅಶೋಕ್ ಕೊಡವೂರು, ಮಂಜುನಾಥ್, ಪ್ರಸಾದ್ ಕಾಂಚನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.