ಬ್ರಹ್ಮಾವರ: ಕೆಲಸದ ನಿಮಿತ್ತ ಬ್ರಹ್ಮಾವರಕ್ಕೆ ಬಂದಿದ್ದ ರಾಯಚೂರು ಮೂಲದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು ನಿವಾಸಿ ಯಲ್ಲಮ್ಮ (33) ಅವರ ಪತಿ ನಿಂಗಪ್ಪ (44) ಅವರು ಬ್ರಹ್ಮಾವರ ಭಾಗದಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿಯೊಂದಿಗೆ ಆಗಾಗ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದರು. ಮೇ 24ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಯಲ್ಲಮ್ಮ ಅವರೊಂದಿಗೆ ಕೊನೆಯ ಬಾರಿ ದೂರವಾಣಿ ಮೂಲಕ ಮಾತನಾಡಿದ್ದರು.
ಮರುದಿನ ಮೇ 25ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಯಲ್ಲಮ್ಮ ಅವರು ನಿಂಗಪ್ಪ ಅವರ ಮೊಬೈಲ್‌ಗೆ ಕರೆ ಮಾಡಿದಾಗ, ಕರೆ ಸ್ವೀಕರಿಸಿದ ವ್ಯಕ್ತಿಯೊಬ್ಬರು ತಾನು ಮನೆಯ ಮಾಲೀಕ ಎಂದು ಹೇಳಿ, ನಿಂಗಪ್ಪ ಅವರು ಕೆಲಸಕ್ಕೆ ಹೋಗಿದ್ದು ಮೊಬೈಲ್‌ನ್ನು ಚಾರ್ಜ್‌ಗೆ ಇಟ್ಟು ಹೋಗಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ.
ಆ ಬಳಿಕ ನಿಂಗಪ್ಪ ಅವರೊಂದಿಗೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ. ಈ ಕುರಿತು ಬ್ರಹ್ಮಾವರದಲ್ಲಿ ಕೆಲಸ ಮಾಡುತ್ತಿರುವ ಪರಿಚಯಸ್ಥರ ಮೂಲಕ ಹಾಗೂ ವಿವಿಧ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಅವರ ಸುಳಿವು ಸಿಕ್ಕಿಲ್ಲ. ಮೇ 30ರಂದು ಯಲ್ಲಮ್ಮ ಅವರು ರಾಯಚೂರಿನಿಂದ ಬ್ರಹ್ಮಾವರಕ್ಕೆ ಬಂದು ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಿಂಗಪ್ಪ ಅವರ ಕಾಣೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.




