Home Crime ಪೇತ್ರಿ ಜಂಕ್ಷನ್‌ನಲ್ಲಿ ಕಾರು ಚಾಲಕನ ಮೇಲೆ ಹಲ್ಲೆ : ನಾಲ್ವರ ವಿರುದ್ಧ ಪ್ರಕರಣ ದಾಖಲು…!!

ಪೇತ್ರಿ ಜಂಕ್ಷನ್‌ನಲ್ಲಿ ಕಾರು ಚಾಲಕನ ಮೇಲೆ ಹಲ್ಲೆ : ನಾಲ್ವರ ವಿರುದ್ಧ ಪ್ರಕರಣ ದಾಖಲು…!!

ಬ್ರಹ್ಮಾವರ: ರಸ್ತೆ ಬದಿ ವಾಹನ ನಿಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ನಾಲ್ವರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂದಳಿಕೆ ನಿವಾಸಿ ಸುಧೀರ್ ಶೆಟ್ಟಿ (46) ನೀಡಿದ ದೂರಿನ ಪ್ರಕಾರ, ಮೇ 30ರಂದು ಸಂಜೆ ಸುಮಾರು 4.15 ಗಂಟೆಗೆ ಪೇತ್ರಿ ಜಂಕ್ಷನ್‌ನ ಎಸ್‌ಪಿ ಚಿಕನ್ ಸೆಂಟರ್ ಎದುರು ಘಟನೆ ನಡೆದಿದೆ.

ತಾರ್ ವಾಹನದ ಚಾಲಕ ಬ್ರಹ್ಮಾವರ ಕಡೆಯಿಂದ ಪೇತ್ರಿ ಜಂಕ್ಷನ್ ಮೂಲಕ ಹಿರಿಯಡ್ಕ ಕಡೆಗೆ ತೆರಳುತ್ತಿದ್ದ ವೇಳೆ, ಲಿವಿಂಗ್ ಫ್ಲವರ್ ಸ್ಟಾಲ್ ಎದುರಿನ ಬ್ಯಾರಿಕೇಡ್ ಬಳಿ ಎದುರಿನಿಂದ ಬರುತ್ತಿದ್ದ  ಮಹೀಂದ್ರ ಕಾರಿಗೆ ದಾರಿ ಬಿಡಲು ತನ್ನ ವಾಹನವನ್ನು ನಿಲ್ಲಿಸಿ ಸನ್ನೆ ಮಾಡಿದ್ದಾನೆ. ಬಳಿಕ ವಾಹನದಿಂದ ಇಳಿದು ಎದುರಿನ ಕಾರಿನ ಚಾಲಕನಿಗೆ ಮುಂದೆ ಸಾಗಲು ದಾರಿ ತೋರಿಸಿ ತನ್ನ ವಾಹನದತ್ತ ಮರಳಿದ್ದಾನೆ.

ಈ ವೇಳೆ ಮಹೀಂದ್ರ ಕಾರಿನಿಂದ ಇಳಿದ ಜಗದೀಶ್ ಅಲಿಯಾಸ್ ಸುನಿಲ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ, ಗೌತಮ್ ಹಾಗೂ ಮತ್ತೋರ್ವ ವ್ಯಕ್ತಿ ತಾರ್ ವಾಹನದ ಚಾಲಕನೊಂದಿಗೆ ವಾಗ್ವಾದ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಕಾರು ಹತ್ತಲು ಯತ್ನಿಸಿದ ಚಾಲಕನನ್ನು ತಡೆದು ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.