ಮುಂದುವರೆದ ಶೋಧ ಕಾರ್ಯ….
ಧರ್ಮಸ್ಥಳ : ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ಅನಾಮಿಕ ವ್ಯಕ್ತಿ ನೀಡಿದ ದೂರಿಗೆ ಸಂಬಂಧಿಸಿದಂತೆ ಧರ್ಮಸ್ಥಳದಲ್ಲಿ ಕಳೆದ ಎರಡು ವಾರಗಳಿಂದ ಎಸ್‌ಐಟಿ ನೇತೃತ್ವದಲ್ಲಿ ಉತ್ಖನನ ನಡೆಯುತ್ತಿದ್ದು, ಈ ನಡುವೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ಎಚ್ಆರ್‌ಸಿ) ತಂಡ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದೆ.
ಎನ್ಎಚ್ಆರ್‌ಸಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್‌ಪಿ) ಯುವರಾಜ್, ಡಿವೈಎಸ್‌ಪಿ ರವಿ ಸಿಂಗ್ ಮತ್ತಿತರರನ್ನು ಒಳಗೊಂಡ ನಾಲ್ವರ ತಂಡ ಸೋಮವಾರ ಬೆಳ್ತಂಗಡಿಯಲ್ಲಿರುವ ಎಸ್ಐಟಿ ಕಚೇರಿ, ಧರ್ಮಸ್ಥಳ ಗ್ರಾಮ ಪಂಚಾಯಿತಿ ಕಚೇರಿ, ಧರ್ಮಸ್ಥಳ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದೆ. ಸಾಕ್ಷಿ ದೂರುದಾರನಿಂದಲೂ ಹೇಳಿಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
ಧರ್ಮಸ್ಥಳದಲ್ಲಿ ಇತ್ತೀಚಿನ ದಶಕಗಳಲ್ಲಿ ಮೃತದೇಹ ಪತ್ತೆಗೆ ಸಂಬಂಧಿಸಿ ಅಸಹಜ ಸಾವು ಪ್ರಕರಣಗಳು ಎಷ್ಟು ದಾಖಲಾಗಿವೆ ಎಂಬ ಮಾಹಿತಿಯನ್ನು ಎನ್ಎಚ್ಆರ್‌ಸಿ ತಂಡದ ಮುಖ್ಯಸ್ಥ, ಐಪಿಎಸ್ ಅಧಿಕಾರಿ ಯುವರಾಜ್ ಅವರು ಧರ್ಮಸ್ಥಳ ಠಾಣೆಯಿಂದ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಎನ್ಎಚ್ಆರ್‌ಸಿಯ ಕೆಲವು ಅಧಿಕಾರಿಗಳು ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ, ಗ್ರಾಮದಲ್ಲಿ ಈಚಿನ ದಶಕಗಳಲ್ಲಿ ಸಿಕ್ಕಿದ್ದ,ಗುರುತು ಪತ್ತೆಯಾಗದ ಶವಗಳನ್ನು ವಿಲೇ ಮಾಡಿದ ಕುರಿತ ವಿವರ ಪಡೆದರು.
ದಶಕಗಳಲ್ಲಿ ಮೃತದೇಹಗಳ ವಿಲೇವಾರಿಗೆ ಎಷ್ಟು ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಅವರಲ್ಲಿ ಯಾರಾದರೂ ಈಗಲೂ ಕಾರ್ಯ ನಿರ್ವಹಿಸುತ್ತಿರುವರೇ ಎಂದು ಮಾಹಿತಿ ಪಡೆದರು. ಮೃತದೇಹಗಳ ವಿಲೇವಾರಿ ಮಾಡಿದ್ದ ಕಾರ್ಮಿಕರು ಗ್ರಾಮದಲ್ಲೇ ವಾಸವಾಗಿದ್ದು, ಅವರ ಮನೆಗಳಿಗೂ ತೆರಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತಾ ಕಾರ್ಮಿಕನಾಗಿರುವ ವ್ಯಕ್ತಿಯೊಬ್ಬರನ್ನು ಗ್ರಾಮ ಪಂಚಾಯಿತಿ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿದರು.
ವಿಶೇಷ ತನಿಖಾ ತಂಡದವರು ಧರ್ಮಸ್ಥಳದ ಬಾಹುಬಲಿ ಬೆಟ್ಟಕ್ಕೆ ತೆರಳುವ ದಾರಿ ಬದಿಯಲ್ಲಿ ಶನಿವಾರ ಶೋಧಕಾರ್ಯ ನಡೆಸಿದ್ದ ಸ್ಥಳಕ್ಕೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.