Home Crime ಕೋಡಿಬೇಂಗ್ರೆ ಡೆಲ್ಟಾ ಬೀಚ್ ದುರಂತ : ಅಲೆಗೆ ಸಿಲುಕಿ ಬೆಂಗಳೂರಿನ ಪ್ರವಾಸಿಗ ಮೃತ್ಯು…!!

ಕೋಡಿಬೇಂಗ್ರೆ ಡೆಲ್ಟಾ ಬೀಚ್ ದುರಂತ : ಅಲೆಗೆ ಸಿಲುಕಿ ಬೆಂಗಳೂರಿನ ಪ್ರವಾಸಿಗ ಮೃತ್ಯು…!!

ಮಲ್ಪೆ: ಉಡುಪಿ ತಾಲೂಕಿನ ಕೋಡಿಬೇಂಗ್ರೆ ಡೆಲ್ಟಾ ಬೀಚ್‌ನಲ್ಲಿ ಸಮುದ್ರದ ಅಲೆಗೆ ಸಿಲುಕಿ ಅಸ್ವಸ್ಥಗೊಂಡಿದ್ದ ಬೆಂಗಳೂರಿನ ಪ್ರವಾಸಿಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.

ಬೆಂಗಳೂರು ನಿವಾಸಿ ಮೋನಿಕಾ (28) ಅವರು ತಮ್ಮ ಪತಿ ಕುಶಲ್ ಎಸ್‌ (31) ಹಾಗೂ ಮಗುವಿನೊಂದಿಗೆ ಮೂರು ದಿನಗಳ ಪ್ರವಾಸಕ್ಕಾಗಿ ಉಡುಪಿಗೆ ಬಂದಿದ್ದರು. ಮೇ 30ರಂದು ಸಂಜೆ ಸುಮಾರು 6.30 ಗಂಟೆಗೆ ಪಡುತೋನ್ಸೆ ಗ್ರಾಮದ ಕೋಡಿಬೇಂಗ್ರೆ ಡೆಲ್ಟಾ ಬೀಚ್‌ನಲ್ಲಿ ಕುಶಲ್ ಅವರು ಸಮುದ್ರದ ನೀರಿನಲ್ಲಿ ಕಾಲು ತೊಳೆಯುತ್ತಿದ್ದ ವೇಳೆ ಭಾರಿ ಅಲೆಯೊಂದು ಅಪ್ಪಳಿಸಿದೆ.

ಅಲೆಯ ಹೊಡೆತಕ್ಕೆ ಆಯತಪ್ಪಿ ಸಮುದ್ರದ ನೀರಿಗೆ ಬಿದ್ದ ಕುಶಲ್ ಅವರು ಮುಳುಗಿ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗೆ ಮಣಿಪಾಲದ ಕಸ್ತೂರ್ಭ ಮೆಡಿಕಲ್ ಕಾಲೇಜ್ ಹಾಸ್ಪಿಟಲ್  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೇ 31ರಂದು ಮುಂಜಾನೆ 3.05 ಗಂಟೆಗೆ ಅವರು ಮೃತಪಟ್ಟಿದ್ದಾರೆ.

ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.