ಕಾರ್ಕಳ : ಮಹಿಳೆಯೋರ್ವರಿಗೆ ಕತ್ತಿಯಿಂದ ಕಡಿದು ಕೊಲೆಯತ್ನ ನಡೆಸಿದ್ದ ಪ್ರಕರಣದಲ್ಲಿ ಆರೋಪಿಯನ್ನು ಎರಡನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ಸಂಚಾರಿ ಪೀಠ ನ್ಯಾಯಾಧೀಶರ ದೋಷಿ ಎಂದು ಪರಿಗಣಿಸಿ ಆದೇಶಿಸಿದ್ದಾರೆ.
2022ರ ಮಾ. 14ರಂದು ಹೆಬ್ರಿ ಠಾಣಾ ವ್ಯಾಪ್ತಿಯ ಮುದ್ರಾಡಿ ಗ್ರಾಮದ ಬಲ್ಲಾಡಿಯ ಗೇರುಬೀಜ ಕಾರ್ಖಾನೆಯಿಂದ ಮಧ್ಯಾಹ್ನ ಮನೆಗೆ ವಾಪಾಸಾಗುತ್ತಿದ್ದ ಪ್ರಮೋದಾ ಕುಲಾಲ್ ಎಂಬವರನ್ನು ಬಲ್ಲಾಡಿ ಈಶ್ವರ ನಗರ ಎಂಬಲ್ಲಿ ಆರೋಪಿ ಬಲರಾಮ ಹೆಗ್ಡೆ ಅಡ್ಡಗಟ್ಟಿ, ಅವ್ಯಾಚ ಶಬ್ದಗಳಿಂದ ನಿಂದಿಸಿ, ಕತ್ತಿಯಿಂದ ಕಡಿದು ಕೊಲೆಗೈಯಲು ಯತ್ನಿಸಿದ್ದನು. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಕೊಲೆಯತ್ನ, ಮಹಿಳೆಗೆ ಲೈಂಗಿಕ ದೌರ್ಜನ್ಯ ಸೇರಿದಂತೆ ಇತರ ಕಲಂನಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ಆದೇಶಿಸಿದ್ದು, ಆರೋಪಿ ಬಲರಾಮ ಹೆಗ್ಡೆಯನ್ನು ಬಂಧಿಸಿ, ಹಿರಿಯಡ್ಕದ ಕಾರಗೃಹಕ್ಕೆ ಕಳುಹಿಸಲಾಗಿದೆ.
ಮಂಗಳವಾರ (ಸೆ. 30) ಶಿಕ್ಷೆಯ ಪ್ರಮಾಣದ ಬಗ್ಗೆ ಸರಕಾರಿ ಅಭಿಯೋಜಕರು ಹಾಗೂ ಆರೋಪಿ ಪರ ವಕೀಲರ ವಾದ – ಪ್ರತಿವಾದವನ್ನು ನ್ಯಾಯಾಲಯವು ಆಲಿಸಿದ್ದು, ಅ. 6 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.