ಉಡುಪಿ: ನಗರಸಭೆ ಹಾಗೂ ಜಿಲ್ಲಾಡಳಿತ ಎರಡೂ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ವಿಫಲವಾಗಿವೆ. ಒಂದು ವಾರದೊಳಗೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ನಗರಸಭಾ ಅಧ್ಯಕ್ಷ ಕಿರಣ್ ಕುಮಾರ್ ಬೈಲೂರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಬಹುತೇಕ ಚರಂಡಿಗಳು ಮುಚ್ಚಿಹೋಗಿದ್ದು, ಮಳೆ ನೀರು ರಸ್ತೆಗಳಲ್ಲಿ ಹರಿದು ಜನರಿಗೆ ತೊಂದರೆ ಉಂಟಾಗುತ್ತಿದೆ. ಇದಲ್ಲದೆ ನಗರಸಭೆ ಕಾನೂನು ಮೀರಿ ಉದ್ದಿಮೆ ಪರವಾನಿಗೆ ಶುಲ್ಕ ಹೆಚ್ಚಿಸಿದೆ. ಸಾರ್ವಜನಿಕರಿಗೆ ಸೂಕ್ತ ಸೇವೆ ನೀಡಬೇಕಾದ ನಗರಸಭೆಯಲ್ಲಿ ಸಿಬ್ಬಂದಿ ಸಮಯಕ್ಕೆ ಲಭ್ಯವಿರುವುದಿಲ್ಲ. ಕಚೇರಿ ಬಹುತೇಕ ಖಾಲಿಯಾಗಿರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ನಗರಸಭಾ ಅಧ್ಯಕ್ಷ ಪ್ರಭಾಕರ್ ಪೂಜಾರಿ ಮಾತನಾಡಿ, ನಗರಸಭೆ ಕೌನ್ಸಿಲ್ ಅವಧಿ ಅಕ್ಟೋಬರ್ನಲ್ಲೇ ಮುಗಿದಿದೆ. ನಂತರ ಶಾಸಕರ ನೇತೃತ್ವದಲ್ಲಿ ಮಳೆಗಾಲದ ಪೂರ್ವಭಾವಿಯಾಗಿ ಸಭೆ ನಡೆಸಿ, ಚರಂಡಿ ಹೂಳೆತ್ತುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈವರೆಗೆ ಕಾರ್ಮಿಕರನ್ನು ನೇಮಿಸಲು ಟೆಂಡರ್ ಕರೆಯಲಾಗಿದೆ. ಆದರೆ ಕೆಲಸ ಆರಂಭಿಸಲು ಕಾರ್ಯಾದೇಶ ನೀಡಿಲ್ಲ ಎಂದು ಆರೋಪಿಸಿದರು.
ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಮಾತನಾಡಿ, ಉಡುಪಿ ನಗರಸಭೆಯು ಮಳೆಗಾಲದ ಪೂರ್ವ ತಯಾರಿ ಕೆಲಸ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ರಾಜಕಾಲುವೆ, ಸಣ್ಣ ಕಾಲುವೆ ಹಾಗೂ ಮಳೆ ನೀರು ಹರಿಯುವ ಚರಂಡಿಗಳ ಹೂಳೆತ್ತುವ ಕಾಮಗಾರಿಯನ್ನು ಇನ್ನೂ ಕೈಗೊಳ್ಳಲಾಗಿಲ್ಲ. ಇದರಿಂದ ಮಳೆ ಬಂದರೆ ನಗರದಲ್ಲಿ ನೀರು ನಿಲ್ಲುವ ಭೀತಿ ಎದುರಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಜಗದೀಶ್ ಆಚಾರ್ ಮತ್ತು ರಶ್ಮಿಕಾ ಶೆಟ್ಟಿ ಉಪಸ್ಥಿತರಿದ್ದರು.




