ಉಡುಪಿ: ಕೇರಳದ ಪಾಲಕ್ಕಾಡ್ನ ಚೇತಲ್ಲೂರು ಜ್ಯೋತಿಷ ಕಲಾಲಯಂ ಹಾಗೂ ಸಾಧನಾ ಸಂಸ್ಥೆ ವತಿಯಿಂದ ಜೂ.10ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆವರಣದಲ್ಲಿರುವ ಸ್ವರ್ಣಮುಖಿ ರಂಗಮಂದಿರದಲ್ಲಿ ‘ವರಾಹ ಮಿಹಿರನ್’ ಎಂಬ ವಿನೂತನ ಕಥಕ್ಕಳಿ ಪ್ರದರ್ಶನ ಆಯೋಜಿಸಲಾಗಿದೆ ಎಂದು ಜ್ಯೋತಿಷ ಕಲಾಲಯಂ ಮುಖ್ಯಸ್ಥ ವಿಜಯಕುಮಾರ್ ಗುಪ್ತನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಜ್ಜಯಿನಿ ರಾಜಮನೆತನದ ನವರತ್ನಗಳಲ್ಲಿ ಒಬ್ಬರಾಗಿದ್ದ ಖಗೋಳಶಾಸ್ತ್ರಜ್ಞ ಹಾಗೂ ಜ್ಯೋತಿಷದ ಶ್ರೇಷ್ಠ ಆಚಾರ್ಯ ವರಾಹಮಿಹಿರರ ಜೀವನ ಚರಿತ್ರೆ ಆಧಾರಿತ ಕಥಕ್ಕಳಿ ಪ್ರದರ್ಶನ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ.
ಕೇರಳದ ಪ್ರಸಿದ್ಧ ಕಥಕ್ಕಳಿ ಕಲಾವಿದರು ಮೇರುಕೃತಿಯನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಲಿದ್ದಾರೆ. ಕಥಕ್ಕಳಿ ಚಿತ್ರಕಥೆಯನ್ನು ವಾಮನನ್ ನಂಬೂದರಿಬರೆದಿದ್ದು, ಕಲಾಲಯಂ ನಿರ್ದೇಶಕ ಕಲಾಮಂಡಲಂ ಕೇಶವನ್ ನಂಬೂದರಿ ನಿರ್ದೇಶಿಸಿದ್ದಾರೆ. ಈ ಸಂದರ್ಭದಲ್ಲಿ ಕೇರಳದ ಗಣ್ಯ ಕಲಾವಿದರು ಮತ್ತು ತಂಡದ ಸದಸ್ಯರನ್ನು ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.
ಉಜ್ಜಯಿನಿ ರಾಜಮನೆತನದ ಆಸ್ಥಾನದಲ್ಲಿ ಚಕ್ರವರ್ತಿ ವಿಕ್ರಮಾದಿತ್ಯನ ಮಗನಾದ ಯುವ ರಾಜಕುಮಾರನ ಜನ್ಮ ಜಾತಕ ಲೆಕ್ಕಾಚಾರಗಳು ಮತ್ತು ಅವನ ಭವಿಷ್ಯಕ್ಕೆ ಸಂಬಂಧಿಸಿದ ಕಥೆಯನ್ನು ಪ್ರದರ್ಶಿಸಲಾಗುತ್ತದೆ. ಜ್ಯೋತಿಷ್ಯ ಮೂಲ ಗ್ರಂಥವಾದ ‘ಹೋರಾ ಶಾಸ್ತ್ರ’ (ಬೃಹತ್ ಜಾತಕ) ಲೇಖಕ ಆಚಾರ್ಯ ವರಾಹಮಿಹಿರರನ್ನು ಸಾರ್ವತ್ರಿಕವಾಗಿ ಪೂಜಿಸಲಾಗುತ್ತದೆ ಎಂದರು. ಸಾಮಾಜಿಕ ಕಾರ್ಯಕರ್ತ ಅರವಿಂದ್, ಜ್ಯೋತಿಷ ಪ್ರಾಧ್ಯಾಪಕ ತೇಜಸ್ ನಂಬೂದರಿ, ಜಯಕೃಷ್ಣನ್ ವಾರಿಯರ್ ಉಪಸ್ಥಿತರಿದ್ದರು.




