Home Crime ಮುಲ್ಕಿ: ಕವತ್ತಾರು ಬಳಿ ಹಾಡು ಹಗಲೇ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು..!!

ಮುಲ್ಕಿ: ಕವತ್ತಾರು ಬಳಿ ಹಾಡು ಹಗಲೇ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು..!!

ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿನಡ್ಕ ಸಮೀಪದ ಕವತ್ತಾರು ಬಳಿಯ ಬಾಲಕೃಷ್ಣ ಶೆಟ್ಟಿಗಾರ್ ಎಂಬವರ ಮನೆಯ ಬಾಗಿಲು ಒಡೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಶನಿವಾರ ಹಾಡಹಗಲೇ ನಡೆದಿದೆ.

ಪಂಜಿನಡ್ಕ-ಕವತ್ತಾರು ಮುಖ್ಯ ರಸ್ತೆಯ ಬಳಿಯ ಶ್ರೀ ಬ್ರಾಮರಿ ಮನೆಯಲ್ಲಿ ಬಾಲಕೃಷ್ಣ ಶೆಟ್ಟಿಗಾರ್ , ಅವರ ಪತ್ನಿ ನಳಿನಾಕ್ಷಿ ಶೆಟ್ಟಿಗಾರ್ ಹಾಗೂ ಇತ್ತೀಚೆಗಷ್ಟೇ ಮದುವೆಯಾದ ಮಗ ಸುಶೀಲ್ ಮತ್ತು ಅವರ ಪತ್ನಿ ವಾಸಿಸುತ್ತಿದ್ದು ಬೆಳಿಗ್ಗೆ ಬಾಲಕೃಷ್ಣ ಶೆಟ್ಟಿಗಾರ್ ಮಗ ಹಾಗೂ ಸೊಸೆ ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದು, ನಳಿನಾಕ್ಷಿ ಶೆಟ್ಟಿಗಾರ ಮನೆಯಲ್ಲಿ ಇರುತ್ತಿದ್ದರು. ಶನಿವಾರ ನಳಿನಾಕ್ಷಿ ಶೆಟ್ಟಿಗಾರ ರವರು ಕಾಪುವಿನ ಮಾರಿಗುಡಿ ದೇವಸ್ಥಾನಕ್ಕೆ ಬೆಳಿಗ್ಗೆ 11 ಗಂಟೆಗೆ ಹೋಗಿ ವಾಪಸ್ ಬರುವಾಗ ಮನೆಯಲ್ಲಿ ಕಳ್ಳತನ ನಡೆದಿದೆ.

ಕಳ್ಳರು ಮನೆಯ ಹಿಂಬಾಗಿಲು ಒಡೆದು ಒಳ ಪ್ರವೇಶಿಸಿ ಕಪಾಟು ಹಾಗೂ ಡ್ರಾವರ್ ಜಾಲಾಡಿ ಬೆಡ್‌ರೂಮ್ ಕವಾಟದಲ್ಲೇ ಇರಿಸಿದ್ದ ಬೀಗದ ಕೈ ಬಳಸಿ ಕವಾಟ ತೆರೆದು ಅದರಲ್ಲಿದ್ದ 5 ಚಿನ್ನದ ಉಂಗುರ, ಒಂದು ಬ್ರಾಸ್‌ಲೈಟ್, ಒಂದು ಚೈನ್ ಕಳವುಗೈದಿದ್ದಾರೆ.

ಕಳ್ಳರು ಮತ್ತೊಂದು ಬೆಡ್‌ರೂಮ್‌ಗೂ ಹೊಕ್ಕಿ ಅಲ್ಲಿದ್ದ ಕವಾಟವನ್ನೂ ಜಾಲಾಡಿ ಒಟ್ಟು ಸುಮಾರಿ 21 ಗ್ರಾಂ ಚಿನ್ನ ಕಳ್ಳತನ ಮಾಡಿದ್ದಾರೆ ಎಂದು
ನಳಿನಾಕ್ಷಿ ಶೆಟ್ಟಿಗಾರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ನಳಿನಾಕ್ಷಿ ಶೆಟ್ಟಿಗಾರ್ ದೇವಸ್ಥಾನಕ್ಕೆ ಹೋಗಿ ವಾಪಸ್ ಸುಮಾರು 2 ಗಂಟೆಗೆ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಮಂಗಳೂರು ಪೊಲೀಸ ವರಿಷ್ಠಾಧಿಕಾರಿಗಳು ಮುಲ್ಕಿ ಪೊಲೀಸರು ಬೆರಳಚ್ಚುತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಶ್ವಾನ ದಳ ಆಗಮಿಸಿ ಘಟನಾ ಸ್ಥಳದಿಂದ 500ಮೀಟರ್ ದೂರದ ಪಂಜಿನಡ್ಕ ಅಂಚೆ ಕಚೇರಿ ತನಕ ಹೋಗಿ ಸುತ್ತುವರಿದು ಹಿಂತಿರುಗಿದೆ.
ಯಾರೋ ಗೊತ್ತಿದ್ದವರೇ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ನಡೆದ ಲಕ್ಷಾಂತರ ಮೌಲ್ಯದ ನಗ, ನಗದು ಕಳ್ಳತನ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಸದ್ಯ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.