Home Karnataka News ಕಂದಕಕ್ಕೆ ಉರುಳಿದ ಟೆಂಪೋ ಟ್ರಾವೆಲರ್ : ಬೆಂಗಳೂರು ಮೂಲದ 13 ಮಂದಿ ಅಪಾಯದಿಂದ ಪಾರು

ಕಂದಕಕ್ಕೆ ಉರುಳಿದ ಟೆಂಪೋ ಟ್ರಾವೆಲರ್ : ಬೆಂಗಳೂರು ಮೂಲದ 13 ಮಂದಿ ಅಪಾಯದಿಂದ ಪಾರು

ಚಿಕ್ಕಮಗಳೂರು: ಟೆಂಪೋ ಟ್ರಾವೆಲರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿರುವ ಘಟನೆ ನಡೆದಿದೆ.

 

ಘಟನೆಯಿಂದ ಅದೃಷ್ಟವಶಾತ್ ವಾಹನದಲ್ಲಿದ್ದ ಬೆಂಗಳೂರು ಮೂಲದ 13 ಮಂದಿ ಪ್ರವಾಸಿಗರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

 

ಬೆಂಗಳೂರಿನಿಂದ ಚಿಕ್ಕಮಗಳೂರಿನ ಗಿರಿಪ್ರದೇಶಗಳಿಗೆ ಪ್ರವಾಸಕ್ಕೆ ಬಂದಿದ್ದ ತಂಡ ಮುಳ್ಳಯ್ಯನಗಿರಿ ವೀಕ್ಷಣೆ ಮುಗಿಸಿ ವಾಪಸ್‌ ಇಳಿಜಾರಿನಲ್ಲಿ ಬರುತ್ತಿದ್ದಾಗ, ಹಿಂಭಾಗದ ಸೀಟಿನಲ್ಲಿದ್ದ ಪ್ರಯಾಣಿಕರೋರ್ವರ ಚಪ್ಪಲಿ ಜಾರಿ ಮುಂಭಾಗದ ಚಾಲಕನ ಸೀಟಿನ ಬಳಿ ಬಂದು ಬಿದ್ದಿದೆ.

 

ಇಳಿಜಾರಿನ ರಸ್ತೆಯಾದ್ದರಿಂದ ಈ ಚಪ್ಪಲಿ ಎಲ್ಲಿ ಬ್ರೇಕ್ ಮತ್ತು ಎಕ್ಸಲೇಟರ್ ಪೆಡಲ್‌ಗಳ ಮಧ್ಯೆ ಸಿಲುಕಿಕೊಳ್ಳುತ್ತದೆಯೋ ಎಂಬ ಆತಂಕದಿಂದಾಗಿ ಚಾಲಕ ತಕ್ಷಣವೇ ಚಲಿಸುತ್ತಿದ್ದ ವಾಹನದಲ್ಲೇ ಬಾಗಿ ಆ ಚಪ್ಪಲಿಯನ್ನು ತೆಗೆಯಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.

 

ಈ ಸಂದರ್ಭ ವಾಹನದ ಗೇರ್ ಲಿವರ್ ನ್ಯೂಟ್ರಲ್ ಸ್ಥಿತಿಗೆ ಬಿದ್ದಿದೆ. ಇಳಿಜಾರಿನ ರಸ್ತೆಯಾಗಿದ್ದರಿಂದ ಗೇರ್ ಹಾಕದೆ ಇದ್ದುದರಿಂದ ಟೆಂಪೋ ಎಕಾಏಕಿ ಅತಿ ವೇಗವಾಗಿ ಮುಂದಕ್ಕೆ ನುಗ್ಗಿದೆ. ಚಾಲಕ ಬ್ರೇಕ್ ಹಾಕುವಷ್ಟರಲ್ಲೇ ವಾಹನವು ರಸ್ತೆ ಬದಿಯ ರಕ್ಷಣಾ ಗೋಡೆಯನ್ನು ದಾಟಿ ಕಂದಕದ ಕಡೆಗೆ ಇಳಿದಿದೆ ಎಂದು ತಿಳಿದು ಬಂದಿದೆ.

 

ಟೆಂಪೋ ಕಂದಕದ ಆರಂಭದಲ್ಲೇ ಸಿಲುಕಿ ನಿಂತಿದ್ದರಿಂದ ಅದೃಷ್ಟವಶಾತ್ ವಾಹನದಲ್ಲಿದ್ದ ಎಲ್ಲಾ 13 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

 

ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.