Home Karnataka News ಇನ್ನು ಮುಂದೆ ಗ್ರಾಹಕರಿಗೆ ಸಿಗಲಿದೆ 10 ಕೆಜಿ ಅನಿಲ ತುಂಬಿದ ಸಿಲಿಂಡರ್‌ : ಗ್ಯಾಸ್ ಕೊರತೆ...

ಇನ್ನು ಮುಂದೆ ಗ್ರಾಹಕರಿಗೆ ಸಿಗಲಿದೆ 10 ಕೆಜಿ ಅನಿಲ ತುಂಬಿದ ಸಿಲಿಂಡರ್‌ : ಗ್ಯಾಸ್ ಕೊರತೆ ನೀಗಿಸಲು ಸರ್ಕಾರ ಹೊಸ ಪ್ಲಾನ್

LPG ಕೊರತೆ ನೀಗಿಸಲು ಸರ್ಕಾರವು ಮಾರುಕಟ್ಟೆಯಲ್ಲಿರುವ 14.2 ಕೆಜಿ ತೂಕದ ಗೃಹ ಬಳಕೆ ಸಿಲಿಂಡರ್‌ಗಳ ಬದಲಿಗೆ, ಇನ್ಮುಂದೆ 10 ಕೆಜಿ ಅನಿಲ ಮಾತ್ರ ತುಂಬಿದ ಸಿಲಿಂಡರ್‌ಗಳನ್ನು ವಿತರಿಸಲು ಚಿಂತನೆ ನಡೆಸುತ್ತಿದೆ.

ಹೌದು, ದೇಶದಲ್ಲಿ ಅಡುಗೆ ಅನಿಲದ ಕೊರತೆಯಿಲ್ಲ ಎಂದು ಕೇಂದ್ರ ಸರ್ಕಾರ ಘೋಷಿಸುತ್ತಿದ್ದರೂ, ವಾಸ್ತವದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಜನರು ಗ್ಯಾಸ್ ಕೊರತೆಯಿಂದಾಗಿ ಸಂಕಷ್ಟ ಎದುರಿಸುತ್ತಿದ್ದಾರೆ.

ಸಿಲಿಂಡರ್ ಬುಕ್ ಮಾಡಿದರೂ ಡೆಲಿವರಿ ಆಗದಿರುವುದು ಅಥವಾ ವಿಳಂಬವಾಗುತ್ತಿರುವುದರಿಂದ ಗ್ರಾಹಕರು ಪರದಾಡುತ್ತಿದ್ದಾರೆ. ಹೀಗಾಗಿ ಗ್ಯಾಸ್ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಮತ್ತು ಸರ್ಕಾರಿ ತೈಲ ಕಂಪನಿಗಳು ಮಹತ್ವದ ಕ್ರಮಕ್ಕೆ ಮುಂದಾಗಿವೆ. ಅದರ ಭಾಗವಾಗಿ 10 ಕೆಜಿಯ ಗೃಹ ಬಳಕೆಯ (Domestic) ಸಿಲಿಂಡರ್ ತರಲು ಯೋಜಿಸಲಾಗುತ್ತಿದೆ.

ಪ್ರಸ್ತುತ ಮನೆಯ ಉದ್ದೇಶಕ್ಕಾಗಿ ಬಳಸುವ ಸಿಲಿಂಡರ್ 14.2 ಕೆಜಿ ತೂಕ ಹೊಂದಿದೆ, ಇದನ್ನು 10 ಕೆಜಿಗೆ ಇಳಿಸಲು ಯೋಜನೆ ರೂಪಿಸಲಾಗುತ್ತಿದೆ. ಮನೆಗಳಿಗೆ ಸಿಲಿಂಡರ್ ಕೊರತೆಯಾಗದಂತೆ ನೋಡಿಕೊಳ್ಳಲು ಹಳೆಯ ಸಿಲಿಂಡರ್‌ಗಳಲ್ಲೇ 10 ಕೆಜಿ ಎಲ್‌ಪಿಜಿ ತುಂಬಿ ನೀಡಲಾಗುವುದು ಎಂದು ತಿಳಿದುಬಂದಿದೆ. 14.2 ಕೆಜಿಯ ಸಿಲಿಂಡರ್ ಸರಾಸರಿ ಒಂದು ಕುಟುಂಬಕ್ಕೆ 35 ರಿಂದ 40 ದಿನಗಳ ಕಾಲ ಬರುತ್ತದೆ. ಅದೇ 10 ಕೆಜಿ ಸಿಲಿಂಡರ್ ಆದರೆ ಒಂದು ತಿಂಗಳ ಕಾಲ ಬರಬಹುದು. ಎಲ್ಲರಿಗೂ ಗ್ಯಾಸ್ ಒದಗಿಸಲು ತೈಲ ಕಂಪನಿಗಳು ಈ ನಿರ್ಧಾರವನ್ನು ಪರಿಶೀಲಿಸುತ್ತಿವೆ. ಸಿಲಿಂಡರ್ ತೂಕ ಕಡಿಮೆ ಮಾಡಿದರೆ ಅದರ ಲೇಬಲ್ ಬದಲಿಸಬೇಕಾಗುತ್ತದೆ ಮತ್ತು ರೀಫಿಲ್ಲಿಂಗ್ ವ್ಯವಸ್ಥೆಯಲ್ಲೂ ಬದಲಾವಣೆ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಗೆ ಸ್ವಲ್ಪ ಸಮಯ ಹಿಡಿಯಬಹುದು. ಪ್ರಸ್ತುತ ಈ ನಿರ್ಧಾರವು ಪ್ರಸ್ತಾವನೆಯ ಹಂತದಲ್ಲಿದ್ದು, ತೈಲ ಕಂಪನಿಗಳು ಇದನ್ನು ಹೇಗೆ ಜಾರಿಗೆ ತರುತ್ತವೆ ಎಂಬುದು ಕುತೂಹಲ ಮೂಡಿಸಿದೆ.