ಪುಂಜಾಲಕಟ್ಟೆ : ವಗ್ಗದಲ್ಲಿರುವ ಬಿ ಎಸ್ ಎನ್ ಎಲ್ ಟೆಲಿಫೋನ್ ಎಕ್ಸ್ಚೇಂಜಿನ ಶಟರ್‌ಬೀಗ ಒಡೆದು ಸರಣಿ ಕಳವು ನಡೆಸಿದ ಕಳ್ಳರು ಬ್ಯಾಟರಿ, ಕೇಬಲ್ ಹಾಗೂ ಪ್ಲೇಟ್ ಗಳನ್ನು ಕಳವು ಮಾಡಿದ್ದಾರೆ.
ಮೇ 16 ರಂದು ಮಧ್ಯರಾತ್ರಿ ವೇಳೆಗೆ ವಗ್ಗದಲ್ಲಿರುವ ಟವರ್‌ಆಫ್ ಆಗಿರುವ ಬಗ್ಗೆ ಮೊಬೈಲ್ ಆಪ್ ಮೂಲಕ ಮಾಹಿತಿ ಬಂದಿದ್ದು, ಬೆಳಗ್ಗೆ ಮಾಹಿತಿ ಗಮನಿಸಿದ ಸುದರ್ಶನ್ ಅವರು ಟೆಕ್ನಿಶಿಯನ್ ತಿಮ್ಮಪ್ಪ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿದಾಗ ಟೆಲಿಫೋನ್ ಎಕ್ಸ್ ಚೇಂಜಿನ ಶಟರ್‌ಬೀಗ ಮುರಿದು ಒಳನುಗ್ಗಿದ ಕಳ್ಳರು ಬ್ಯಾಟರಿ ಜೋಡಣೆಗೆ ಬಳಸಲಾಗಿದ್ದ ಸುಮಾರು 20 ಸಾವಿರ ರೂಪಾಯಿ ಮೌಲ್ಯದ 40* ಮೀಟರ್ ಉದ್ದದ ತಾಮ್ರದ ಕೇಬಲ್ ಕಳವು ಗೈದಿರುವುದು ಬೆಳಕಿಗೆ ಬಂದಿದೆ.
ಇದಾದ ಬಳಿಕ ಅವರು ಎಕ್ಚೇಂಜಿಗೆ ಹೊಸ ಬೀಗ ಹಾಕುವಂತೆ ಸೂಚಿಸಿದ್ದಾರೆ. ಮೇ 18ರಂದು ಬೆಳಗ್ಗೆ 10.30ಕ್ಕೆ ಎಜಿಎಂ ಸ್ನೇಹ ಹಾಗೂ ಟೆಕ್ನಿಶಿಯನ್ ತಿಮ್ಮಪ್ಪ ಅವರು ಮತ್ತೆ ಎಕ್ಸ್ ಚೇಂಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಲ್ಲಿನ ಕಿಟಕಿಯ ಗಾಜುಗಳನ್ನು ಪುಡಿಗೈದು ಒಳನುಗ್ಗಿರುವ ಕಳ್ಳರು 35 ಸಾವಿರ ರೂಪಾಯಿ ಮೌಲ್ಯದ 600 ಎ ಎಚ್ ಸಾಮಥ್ಯದ 4 ಎಕ್ಸ್ ಚೇಂಜ್ ಬ್ಯಾಟರಿಗಳನ್ನು ಹಾಗೂ ಸುಮಾರು 20 ಸಾವಿರ ರೂಪಾಯಿ ಮೌಲ್ಯದ ಪ್ಲೇಟ್ ಗಳನ್ನು ಕಳವು ಮಾಡಲಾಗಿದೆ.
ಮೇ 16 ರಿಂದ ಮೇ 18 ರ ನಡುವಿನ ಅವಧಿಯಲ್ಲಿ ಸುಮಾರು 62 ಸಾವಿರ ರೂಪಾಯಿ ಮೌಲ್ಯದ ಬ್ಯಾಟರಿ, ತಾಮ್ರದ ಕೇಬಲ್ ಹಾಗೂ ಪ್ಲೇಟ್ ಗಳನ್ನು ಕಳವು ಮಾಡಲಾಗಿದೆ ಎಂದು ಬಿ.ಸಿ. ರೋಡ್‌ನ ಬಿ ಎಸ್ ಎನ್ ಎಲ್ ಜ್ಯೂನಿಯರ್ ಟೆಲಿಕಾಂ ಆಫೀಸರ್ ಸುದರ್ಶನ್ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




