ಮಂಗಳೂರು: ನಗರದ ಕೋಡಿಕಲ್ ಬಳಿ ಶನಿವಾರ ತಡರಾತ್ರಿ ಕರ್ತವ್ಯ ನಿರತ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿರುವ ಆಘಾತಕಾರಿ ಘಟನೆ ಸಂಭವಿಸಿದೆ.
ಅದೃಷ್ಟವಶಾತ್ ಕಾನ್‌ಸ್ಟೇಬಲ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉರ್ವ ಪೊಲೀಸ್ ಠಾಣೆಯ ಇಬ್ಬರು ಕಾನ್‌ಸ್ಟೇಬಲ್‌ಗಳು ಶನಿವಾರ ತಡರಾತ್ರಿ 2:07ರ ಸುಮಾರಿಗೆ ಕೋಡಿಕಲ್‌ನ ನಾರಾಯಣ ಗುರು ಕೋ-ಆಪರೇಟಿವ್ ಸೊಸೈಟಿ ಮುಂಭಾಗ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಆ ಮಾರ್ಗವಾಗಿ ಬಂದ ಬೈಕ್ ಒಂದನ್ನು ತಡೆಯಲು ಪೊಲೀಸರು ಯತ್ನಿಸಿದ್ದಾರೆ. ಆದರೆ, ಬೈಕ್ ಸವಾರ ವಾಹನವನ್ನು ನಿಲ್ಲಿಸದೆ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿ ಅಲ್ಲಿಂದ ಪರಾರಿಯಾಗಿದ್ದನು.
ಅಲ್ಲಿಂದ ತಪ್ಪಿಸಿಕೊಂಡಿದ್ದ ದುಷ್ಕರ್ಮಿಗಳು ಸ್ವಲ್ಪ ಸಮಯದ ಬಳಿಕ ಅದೇ ಬೈಕ್‌ನಲ್ಲಿ ಮತ್ತೆ ಮರಳಿ ಬಂದಿದ್ದಾರೆ. ಈ ವೇಳೆ ಬೈಕ್‌ನ ಹಿಂಬದಿ ಕುಳಿತಿದ್ದ ಸವಾರನು ತಪಾಸಣ ನಿರತರಾಗಿದ್ದ ಓರ್ವ ಕಾನ್‌ಸ್ಟೇಬಲ್ ಮೇಲೆ ಕೋಲಿನ ಮಾದರಿಯ ವಸ್ತುವಿನಿಂದ ಏಕಾಏಕಿ ದಾಳಿ ನಡೆಸಿದ್ದಾನೆ. ದಾಳಿಯ ತೀವ್ರತೆಗೆ ಕಾನ್‌ಸ್ಟೇಬಲ್ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಪೊಲೀಸರ ಮೇಲೆಯೇ ದುಷ್ಕರ್ಮಿಗಳು ದರ್ಪ ತೋರಿರುವ ಈ ಇಡೀ ಘಟನೆಯ ದೃಶ್ಯಾವಳಿಗಳು ಸಮೀಪದ ಕಟ್ಟಡವೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಸದ್ಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಉರ್ವ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬಸಿದ್ದಾರೆ.




