ಕೊಲ್ಲೂರು : ಕೊಲ್ಲೂರು ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯೊಬ್ಬರ ಮೈಮೇಲಿದ್ದ ಸುಮಾರು 18 ಗ್ರಾಂ ತೂಕದ ಚಿನ್ನಾಭರಣ ಕಳವುಗೊಂಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.
ಮೇ 17ರಂದು ದಳಿ ಪ್ರದೇಶದಲ್ಲಿ ಕೊಡಚಾದ್ರಿಯಿಂದ ಕೇರಳದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪ್ ಹಾಗೂ ಟೆಂಪೋ ನಡುವೆ ಸಂಭವಿಸಿದ ಅಪಘಾತದಲ್ಲಿ ಕೇರಳ ಮೂಲದ ಜ್ಯೋತಿ ಮತ್ತು ಆರಿಯಾ ಅನುಪ್ ಮೃತಪಟ್ಟಿದ್ದರು. ಅಪಘಾತದ ವೇಳೆ ಉಂಟಾದ ಗೊಂದಲದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡ ಕಳ್ಳರು, ಮೃತ ಜ್ಯೋತಿ ಅವರ ಮೈಮೇಲಿದ್ದ ಚಿನ್ನಾಭರಣವನ್ನು ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ.
ಅಪಘಾತದ ಆಘಾತ ಮತ್ತು ಅಂತ್ಯಕ್ರಿಯೆಯ ಕಾರ್ಯಗಳ ಬಳಿಕ ಚಿನ್ನಾಭರಣ ನಾಪತ್ತೆಯಾಗಿರುವುದು ಕುಟುಂಬಸ್ಥರ ಗಮನಕ್ಕೆ ಬಂದಿದ್ದು, ಅವರು ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತ ಸ್ಥಳದ ಸುತ್ತಮುತ್ತಲಿನ ಮಾಹಿತಿ ಕಲೆಹಾಕುತ್ತಿದ್ದು, ಚಿನ್ನಾಭರಣ ಕಳವು ಮಾಡಿದವರನ್ನು ಪತ್ತೆಹಚ್ಚಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಅಪಘಾತದ ದುಃಖದ ನಡುವೆಯೇ ನಡೆದಿರುವ ಈ ಕಳವು ಪ್ರಕರಣ ಸ್ಥಳೀಯರಲ್ಲೂ ಆಕ್ರೋಶಕ್ಕೆ ಕಾರಣವಾಗಿದೆ.




