Home Latest ಉಡುಪಿ : ಬಿರುಗಾಳಿ ಸಹಿತ ಭಾರಿ ಮಳೆಗೆ ಅಪಾರ ಹಾನಿ

ಉಡುಪಿ : ಬಿರುಗಾಳಿ ಸಹಿತ ಭಾರಿ ಮಳೆಗೆ ಅಪಾರ ಹಾನಿ

ಉಡುಪಿ: ಜಿಲ್ಲೆಯಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ನಸುಕಿನಲ್ಲಿ ಭಾರಿ ಪ್ರಮಾಣದಲ್ಲಿ ಗಡುಗು-ಸಿಡಿಲು ಅಬ್ಬರ, ಬಿರುಗಾಳಿಯೊಂದಿಗೆ ಮಳೆ ಸುರಿದಿದ್ದು ವಿವಿಧೆಡೆ ಹಾನಿ ಉಂಟಾಗಿದೆ.

 

ಜಿಲ್ಲೆಯ ವಿವಿಧೆಡೆ ಬಿರುಗಾಳಿಯಿಂದಾಗಿ ಮರಗಳು ಉರುಳಿ ಹಾಗೂ ಸಿಡಿಲು ಬಿಡಿದು 6 ಮನೆಗಳು ಭಾಗಶ: ಹಾನಿಯಾಗಿದೆ.

 

ಕಿನ್ನಿಮೂಲ್ಕಿ ಬಳಿ ಮರ ಬಿದ್ದು ಮನೆ ಹಾಗೂ ಬೈಕ್ ಜಖಂ ಗೊಂಡಿದೆ.

 

ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ರತ್ನಾ ಅಣ್ಣಪ್ಪ, ಕುಂದಾಪುರ ತಾಲೂಕಿನ ಹಳನಾಡು ಗ್ರಾಮದ ಜಲಜಾ ಕುಲಾಲ್ತಿ, ಕಾವ್ರಾಡಿ ಗ್ರಾಮದ ಗಿರಿಜಾ ಕುಲಾಲ್ತಿ, ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಮೀನಾ ಸದಾನಂದ, ಅಲೆವೂರು ಗ್ರಾಮದ ಚನ್ನಮ್ಮ ದೇವೇಂದ್ರ ಇಳಿಗೆರೆ ಇವರ ಮನೆಗಳಿಗೆ ಹಾನಿಯಾಗಿದೆ.

ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮದ ಸದಾಶಿವ ಶೆಟ್ಟಿ ಅವರ ಕೊಟ್ಟಿಗೆ ಭಾಗಶ: ನಾಶಗೊಂಡಿದೆ.

 

ಉಡುಪಿ ನಗರದಲ್ಲಿ ಶನಿವಾರ (ಮೇ 23) ರಾತ್ರಿ ಹಾಗೂ ಭಾನುವಾರ (ಮೇ 24) ನಸುಕಿನ 4 ಗಂಟೆಗೆ ಭಾರಿ ಬಿರುಗಾಳಿಯೊಂದಿಗೆ ಅಬ್ಬರದ ಮಳೆ ಸುರಿದಿದ್ದು, ವಿವಿಧೆಡೆ ಮರಗಳು ಉರುಳಿ ಮನೆಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ. ಅಲ್ಲಿಲ್ಲಿ ವಿದ್ಯುತ್ ಕಂಬಗಳೂ ಸಹ ಮುರಿದುಬಿದ್ದಿದ್ದು, ಅನೇಕ ಕಡೆಗಳಲ್ಲಿ ರಾತ್ರಿಯಿಂದ ಬೆಳಗಿನವರೆಗೆ ವಿದ್ಯುತ್ ಕೈಕೊಟ್ಟಿತ್ತು. ಹಾನಿಯಾದ ಕಡೆಗಳಲ್ಲಿ ಬೆಳಗ್ಗೆ ದುರಸ್ತಿ ಕಾರ್ಯ ಆರಂಭಿಸಿದ್ದರಿಂದ ಸಂಜೆ 5ರ ವರೆಗೂ ಆಗಾಗ ವಿದ್ಯುತ್ ಕಡಿತ ಮಾಡಲಾಯಿತು.

 

ಮಲ್ಪೆ ಸಮೀಪದ ಹೂಡೆಯಲ್ಲಿ ಮನೆಯೊಂದರ ಬಳಿ ತೆಂಗಿನಮರ ತುಂಡಾಗಿ ಬಿದ್ದಿದೆ.

ಭಾನುವಾರ (ಮೇ 24) ದಿನವಿಡೀ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಆಗಾಗ ಜಿಟಿಜಿಟಿ ಮಳೆಯಾಗುತ್ತಿತ್ತು. ರಾತ್ರಿ ವೇಳೆ ಕೆಲ ಸಮಯ ಉತ್ತಮ ಮಳೆಯಾಯಿತು.

 

ಉಡುಪಿ ನಗರದಲ್ಲಿ ಭಾನುವಾರ ನಸುಕಿನ 4 ಗಂಟೆಯ ವೇಳೆ ಸುರಿದ ಭಾರಿ ಬಿರುಗಾಳಿ ಮಳೆಗೆ ಕಲ್ಸಂಕ ವೃತ್ತದಿಂದ ಬಡಗುಪೇಟೆ ಸಂಪರ್ಕಿಸುವ ರಸ್ತೆ ತಿರುವಿನಲ್ಲಿ ಕೆಳಭಾಗದಲ್ಲಿರುವ ಚರಂಡಿಯಲ್ಲಿ ಮಳೆ ನೀರಿನ ಒತ್ತಡದಿಂದ ಗುಂಡಿಬಿದ್ದಿದ್ದು, ಈ ಮಾರ್ಗದಲ್ಲಿ ವಾಹನ ಚಲಿಸದಂತೆ ಪೊಲೀಸ್ ಬ್ಯಾರಿಕೇಡ್ ಅಳವಡಿಸಿದ್ದಾರೆ.