ಉಳ್ಳಾಲ : ಸೋಮೇಶ್ವರದ ಕಡಲ ಕಿನಾರೆಯಲ್ಲಿ ಕುಂಪಲದ ವ್ಯಕ್ತಿಯೋರ್ವರ ಶವ ಪತ್ತೆಯಾಗಿದ್ದು, ಖಾಸಗಿ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆಗೈದಿರೋದಾಗಿ ಶಂಕಿಸಲಾಗಿದೆ.
ಕುಂಪಲ ಚೇತನ ನಗರ ನಿವಾಸಿ ವಿನೋದ್ ಕುಂಪಲ(49) ಎಂಬವರ ಮೃತದೇಹ ಸೋಮೇಶ್ವರ ಕಡಲ ಕಿನಾರೆಯಲ್ಲಿ ಶನಿವಾರ ಮುಂಜಾನೆ ಪತ್ತೆಯಾಗಿದೆ.
ವಿನೋದ್ ಅವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ ಮನೆಯಿಂದ ಹೊರಟ ಅವರು ಕೆಲಸಕ್ಕೂ ತೆರಳದೆ ರಾತ್ರಿ ಮನೆಗೂ ಮರಳದೆ ನಾಪತ್ತೆಯಾಗಿದ್ದರು.
ಶನಿವಾರ ಮುಂಜಾನೆ ಸೋಮೇಶ್ವರ ಪುರಸಭಾ ಕಚೇರಿ ಬಳಿಯ ಸಮುದ್ರ ಕಿನಾರೆಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದ್ದು ಸ್ಥಳೀಯರು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿ ಶವದ ಗುರುತು ಪತ್ತೆಹಚ್ಚಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ವಿನೋದ್ ಅವರು ಖಾಸಗಿ ಫೈನಾನ್ಸ್ ಒಂದರಿಂದ ಮಕ್ಕಳ ಶಿಕ್ಷಣಕ್ಕಾಗಿ ಸಾಲ ಪಡೆದಿದ್ದು, ಫೈನಾನ್ಸ್ ನವರ ನಿರಂತರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೈದಿರಬಹುದೆಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಉಳ್ಳಾಲ ಪೊಲೀಸರು ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೃತ ವಿನೋದ್ ಅವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ.