Home Crime ಭೀಕರ ಅಪಘಾತ ಮ್ಯಾಕ್ಸ್ ಇನ್ಪೋಟೆಕ್‌‌ ಸಂಸ್ಥಾಪಕ ಮುಕೇಶ್‌ ಶೆಟ್ಟಿ ಸಾವು…!!

ಭೀಕರ ಅಪಘಾತ ಮ್ಯಾಕ್ಸ್ ಇನ್ಪೋಟೆಕ್‌‌ ಸಂಸ್ಥಾಪಕ ಮುಕೇಶ್‌ ಶೆಟ್ಟಿ ಸಾವು…!!

ಕಾರವಾರ : ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಖ್ಯಾತ ವೆಬ್‌ ಡೆವಲಪರ್‌, ಮ್ಯಾಕ್ಸ್ ಇನ್ಪೋಟೆಕ್‌‌ ಸಂಸ್ಥಾಪಕ ಕುಂದಾಪುರ ಮೂಲದ ಮುಕೇಶ್‌ ಕೃಷ್ಣ ಶೆಟ್ಟಿ ಎಂಬವರು ಮೃತಪಟ್ಟಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ನೆಂಪು ಮೂಲದ ಮುಕೇಶ್‌ ಕೃಷ್ಣ ಶೆಟ್ಟಿ (39) ಅವರು ಮಾರ್ಚ್‌ 5ರಂದು ಕುಂದಾಪುರದಿಂದ ಯಲ್ಲಾಪುರ ಮಾರ್ಗವಾಗಿ ಹುಬ್ಬಳಿಗೆ ತೆರಳುತ್ತಿದ್ದರು. ಆದರೆ ಯಲ್ಲಾಪುರ ತಾಲೂಕಿನ ಮಳಲಗಾಂವ ಬಳಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಎದುರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರು ಮುಖಾಮುಖಿ ಢಿಕ್ಕಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಬೆಳಗಾವಿಗೆ ಮದುವೆಗಾಗಿ ಶಿರಸಿ ಘಟಕದ ಕೆಎಸ್‌ಆರ್‌ಟಿಸಿ ಬಸ್‌ ಸಿದ್ದಾಪುರದಿಂದ ಯಲ್ಲಾಪುರ ಮಾರ್ಗವಾಗಿ ಬೆಳಗಾವಿಗೆ ತೆರಳುತ್ತಿತ್ತು. ಅಪಘಾತ ಸಂಭವಿಸುತ್ತಿದ್ದಂತೆಯೇ 108 ವಾಹನದ ಮೂಲಕ ಮುಕೇಶ್‌ ಕೃಷ್ಣ ಶೆಟ್ಟಿ ಅವರನ್ನು ಯಲ್ಲಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೂ ಮುಕೇಶ್‌ ಶೆಟ್ಟಿ ಅವರು ಬದುಕಿ ಉಳಿಯಲಿಲ್ಲ ಎಂದು ತಿಳಿದು ಬಂದಿದೆ.

ವಾಹನಗಳಲ್ಲಿ ಪ್ರಯಾಣಿಕರ ರಕ್ಷಣೆಗಾಗಿ ಏರ್‌ಬ್ಯಾಗ್‌ ಅಳವಡಿಸಿಕೊಳ್ಳುವುದನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ. ಆದರೆ ಬಸ್‌ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಕಾರಿನ ಏರ್‌ ಬ್ಯಾಗ್‌ ಬ್ಲಾಸ್ಟ್‌ ಆಗಿ ಸಾವು ಸಂಭವಿಸಿದ್ಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.

ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಆದರೆ ಮುಕೇಶ್‌ ಶೆಟ್ಟಿ ಅವರ ಮುಂಗಾಲು ಹಾಗೂ ಕೈಗೆ ಸಣ್ಣ ಪ್ರಮಾಣದ ಗಾಯವಾಗಿರುವುದನ್ನು ಬಿಟ್ರೆ ಬೇರೆ ಯಾವುದೇ ಭಾಗಕ್ಕೂ ಗಾಯವಾಗಿಲ್ಲ.

ಮುಕೇಶ್‌ ಶೆಟ್ಟಿ ಅವರು ಪ್ರಯಾಣದ ವೇಳೆಯಲ್ಲಿ ಕಡ್ಡಾಯವಾಗಿ ಸೀಟ್‌ ಬೆಲ್ಟ್‌ ಧರಿಸುತ್ತಿದ್ರು, ಅಪಘಾತದ ಸಂಭವಿಸುವ ವೇಳೆಯಲ್ಲಿಯೂ ಸೀಟ್‌ ಬೆಲ್ಟ್‌ ಧರಿಸಿದ್ದಾರೆ. ಇದರಿಂದಾಗಿ ಏರ್‌ಬ್ಯಾಗ್‌ ಓಪನ್‌ ಆಗಿದೆ. ಆದರೆ ಇದೇ ವೇಳೆಯಲ್ಲಿ ಏರ್‌ಬ್ಯಾಗ್‌ ಸ್ಟೋಟಗೊಂಡಿದ್ಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಯಾಕೆಂದ್ರೆ ಅಪಘಾತದ ನಂತರ ಏರ್‌ಬ್ಯಾಗ್‌ ಹರಿದಿರುವುದು ಕಂಡು ಬಂದಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನೆಂಪು ಮೂಲದ ಮುಕೇಶ್‌ ಕೃಷ್ಣ ಶೆಟ್ಟಿ ಅವರು ಬದುಕು ಕಟ್ಟಿಕೊಂಡಿದ್ದು ಮಂಗಳೂರಿನಲ್ಲಿ. ಮಂಗಳೂರಿನ ರಾಮಕೃಷ್ಣ ಆಶ್ರಮದ ಹಳೆಯ ವಿದ್ಯಾರ್ಥಿಯಾಗಿರುವ ಮುಕೇಶ್‌ ಶೆಟ್ಟಿ ಅವರು ಬದುಕು ಕಟ್ಟಿಕೊಂಡಿದ್ದು ಮಂಗಳೂರಿನಲ್ಲಿ.

ಮಂಗಳೂರು ನಗರದ ಬೆಂದೂರ್‌ ವೆಲ್‌ ನಲ್ಲಿ ಮ್ಯಾಕ್ಸ್ ಇನ್ಪೋಟೆಕ್‌‌ ಅನ್ನೋ ಸಂಸ್ಥೆಯನ್ನು ಕಟ್ಟಿ ಡಿಜಿಟಲ್‌ ಮೀಡಿಯಾದಲ್ಲಿ ವೆಬ್‌ಡೆವಲಪರ್‌ ಆಗಿ ಕೆಲಸ ಮಾಡ್ತಿದ್ರು. ನಾಡಿನ ಹೆಸರಾಂತ ನೂರಾರು ಡಿಜಿಟಲ್‌ ಸುದ್ದಿ ಮಾಧ್ಯಮಗಳಿಗೆ ಹಿರಿಯ ವೆಬ್‌ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದರು.

ತಮ್ಮ ಕಂಪೆನಿಯ ಮೂಲಕ ಡಿಜಿಟಲ್‌ ವೆಬ್‌ಸೈಟ್‌, ಮೊಬೈಲ್‌ ಆಪ್‌, ಡಿಜಿಟಲ್‌ ಮಾರ್ಕೆಟಿಂಗ್‌ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ವ್ಯವಹಾರದ ನಿಮಿತ್ತ ಯಲ್ಲಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳುವ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದ್ದು, ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಮುಕೇಶ್‌ ಶೆಟ್ಟಿ ಅವರು ಪತ್ನಿ, ತಾಯಿ ಹಾಗೂ ಇಬ್ಬರು ತಮ್ಮಂದಿರನ್ನು ಅಗಲಿದ್ದಾರೆ.

ಮುಕೇಶ್‌ ಶೆಟ್ಟಿ ಅವರು ಕಳೆದ ಕೆಲವು ತಿಂಗಳಿನಿಂದ ಹೆಚ್ಚಾಗಿ ತಮ್ಮ ಹುಟ್ಟೂರಲ್ಲೇ ಇರ್ತಾ ಇದ್ರು. ಕುಂದಾಪುರದಲ್ಲಿ ಸಾಫ್ಟ್‌ವೇರ್‌ ಕಂಪೆನಿಯನ್ನು ಹುಟ್ಟುಹಾಕಿ ತನ್ನೂರಿನ ಯುವ ಪ್ರತಿಭೆಗಳಿಗೆ ಉದ್ಯೋಗ ದೊರಕಿಸುವ ಕನಸು ಕಂಡಿದ್ದರು.

ಖ್ಯಾತ ಯುವ ಡೆವಲಪರ್‌ ಮುಕೇಶ್‌ ಕೃಷ್ಣ ಶೆಟ್ಟಿ ಅವರು ಅಪಾರ ಸ್ನೇಹಿತರನ್ನು ಹೊಂದಿದ್ದು, ಅವರ ನಿಧನಕ್ಕೆ ಸ್ನೇಹಿತರು, ಮಾಧ್ಯಮ ಮಿತ್ರರು, ಕಂಬನಿ ಮಿಡಿದಿದ್ದಾರೆ. ಮಾರ್ಚ್‌ 7 ರಂದು ಶನಿವಾರ ಮುಕೇಶ್‌ ಶೆಟ್ಟಿ ಅವರ ಹುಟ್ಟೂರಾಗಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಂಡ್ಸೆ ಸಮೀಪದ ನೆಂಪು ಮನೆಯಲ್ಲಿ ಅಂತ್ಯಕ್ರೀಯೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.