ಬೈಂದೂರು : ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಗ್ರಾಮೀಣ ಭಾಗಗಳನ್ನು ಅವೈಜ್ಞಾನಿಕವಾಗಿ ಸೇರಿಸಿರು ವುದರಿಂದ ಕೃಷಿಕರು ಪ್ರತಿದಿನ ಪರದಾಡುವಂತಾಗಿದೆ. ಹೀಗಾಗಿ ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿ ಬೈಂದೂರು ರೈತ ಸಂಘದ ನೇತೃತ್ವದಲ್ಲಿ ಶುಕ್ರವಾರ ಪಟ್ಟಣ ಪಂಚಾಯತ್. ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು
ಸಾವಿರಾರು ರೈತರು ಜಾಥಾದ ಮೂಲಕ ತಾಲೂಕಾಡಳಿತ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಬೈಂದೂರು ವ್ಯಾಪ್ತಿಯ ಸುತ್ತ ಮುತ್ತ ಹತ್ತಾರು ಕುಗ್ರಾಮಗಳಿವೆ. ಕೃಷಿ ಇಲ್ಲಿನ ಜನರ ಜೀವನಾಧಾರ. ಅಭಿವೃದ್ಧಿ ಹೆಸರಿನಲ್ಲಿ ಪಂಚಾಯತ್ ವ್ಯಾಪ್ತಿಗೆ ಈ ಹಳ್ಳಿಗಳನ್ನು ಸೇರಿಸಿರುವುದರಿಂದ ಅಲ್ಲಿನ ಜನರ ಪರಿಸ್ಥಿತಿ ಬರಡು ಭೂಮಿಯಂತಾಗಿದೆ. 23 ಕಿ.ಮೀ.ಯಲ್ಲಿ ಬಹುತೇಕ ಭಾಗ ಅರಣ್ಯ ವ್ಯಾಪ್ತಿಯಾಗಿದ್ದು ರೈತರು ಸಣ್ಣ ಪುಟ್ಟ ಕೆಲಸಕ್ಕೂ ಉಡುಪಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ. ಅಕ್ರಮ ಸಕ್ರಮ ಗ್ರಾಮೀಣ ಕೃಪಾಂಗ ಸೌಲಭ್ಯವೂ ದೊರೆಯುತ್ತಿಲ್ಲ. ಈಗಾಗಲೇ ಸಾವಿರಾರು ರೈತರಿಗೆ ಆಗುವ ಸಮಸ್ಯೆ ಕುರಿತು ಸರಕಾರ, ಜಿಲ್ಲಾಡಳಿತ ಸ್ಪಂದಿಸಬೇಕೆಂದು ಹಲವು ಬಾರಿ ಮನವಿ ನೀಡಿದರೂ ಇಲಾಖೆ ಸ್ಪಂದಿಸಿಲ್ಲ. ಹೀಗಾಗಿ ನ್ಯಾಯಕ್ಕಾಗಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗಿದೆ ಎಂದರು.
ಜಿಲ್ಲಾಡಳಿತ ಈ ಸಮಸ್ಯೆಗೆ ಗುರುವಾರದ ಒಳಗೆ ಸ್ಪಷ್ಟ ಮಾಹಿತಿ ನೀಡಿ ಸರಿಪಡಿಸದಿದ್ದರೆ, ಶುಕ್ರವಾರ ಡಿಸಿ ಕಚೇರಿ ಎದುರು ಸಹಸ್ರಾರು ರೈತರು ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸುತ್ತೇವೆ. ಬೈಂದೂರು ತಾಲೂಕು ಆಡಳಿತ ಕಚೇರಿ ಎದುರು ಅಮರಣಾಂತ ಪ್ರತಿಭಟನೆ ನಡೆಸುತ್ತೇವೆ ಪ್ರತಿಭಟನಾಕಾರರು ಹೇಳಿದ್ದಾರೆ.
ಈ ಸಂದರ್ಭ ಜಿಲ್ಲಾಡಳಿತದ ಪರವಾಗಿ ತಹಶೀಲ್ದಾರ್ ಪ್ರದೀಪ ಕುರ್ಡೇಕರ್ ಮನವಿ ಸ್ವೀಕರಿಸಿ ಸರಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ ನಾಯಕರು, ಮುಂದಾಳುಗಳು ಭಾಗವಹಿಸಿದ್ದರು. ಯಡ್ತರೆ ಗ್ರಾ.ಪಂ.ಮಾಜಿ ಸದಸ್ಯ ಗಣೇಶ ಪೂಜಾರಿ ನಿರೂಪಿಸಿ, ವೀರಭದ್ರ ಗಾಣಿಗ ವಂದಿಸಿದರು.