Home Crime ಕಾಸರಗೋಡು: ಕ್ರಿಕೆಟ್ ಪಂದ್ಯದ ಜಗಳ : ಸಹಕಾರಿ ಬ್ಯಾಂಕ್ ಭದ್ರತಾ ಸಿಬ್ಬಂದಿಯ ಭೀಕರ ಕೊಲೆ…!!

ಕಾಸರಗೋಡು: ಕ್ರಿಕೆಟ್ ಪಂದ್ಯದ ಜಗಳ : ಸಹಕಾರಿ ಬ್ಯಾಂಕ್ ಭದ್ರತಾ ಸಿಬ್ಬಂದಿಯ ಭೀಕರ ಕೊಲೆ…!!

ಕಾಸರಗೋಡು : ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ನಡೆದ ಕ್ಷುಲ್ಲಕ ವಾಗ್ವಾದವೊಂದು ಮಾರಕ ತಿರುವು ಪಡೆದು, ಬ್ಯಾಂಕಿನ ಭದ್ರತಾ ಸಿಬ್ಬಂದಿಯನ್ನು ಅವರ ಕೆಲಸದ ಸ್ಥಳದಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಲಾದ ಭೀಕರ ಘಟನೆ ಕುಂಬಡಾಜೆ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ಕುಂಬಡಾಜೆ ಪಂಚಾಯತ್ ವ್ಯಾಪ್ತಿಯ ಬದ್ರು ಕುಡ್ಲು ಹೌಸ್ ನಿವಾಸಿ ಸುರೇಶ್ ಬಿ.ಕೆ (42) ಕೊಲೆಯಾದ ದುರ್ದೈವಿ.

ಈತ ಕುಂಬಡಾಜೆ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಸಂಜೆ ಕುಂಬಡಾಜೆ ಪಂಚಾಯತ್ ಮೈದಾನದಲ್ಲಿ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ಸುರೇಶ್ ಹಾಗೂ ಅವರ ಮಗನಿಗೂ ಮತ್ತು ಸ್ಥಳೀಯ ಯುವಕರ ಗುಂಪಿನ ನಡುವೆ ತೀವ್ರ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಈ ಜಗಳದ ವೈಷಮ್ಯ ಮನಸ್ಸಿನಲ್ಲಿಟ್ಟುಕೊಂಡ ಆರೋಪಿಗಳು ರಾತ್ರಿ ಹೊಂಚು ಹಾಕಿದ್ದಾರೆ. ರಾತ್ರಿ 9.25 ರ ಸುಮಾರಿಗೆ ಸುರೇಶ್ ಮಾರ್ಪಿನಡುಕ್ಕ ಜಂಕ್ಷನ್‌ನಲ್ಲಿರುವ ಬ್ಯಾಂಕ್ ಆವರಣದ ಹತ್ತಿರ ನಿಂತಿದ್ದಾಗ ಅದೇ ಗ್ರಾಮದ ಕಿರಣ್ ಹಾಗೂ ಅಖಿಲೇಶ್ ಎಂಬುವವರು ಏಕಾಏಕಿ ದಾಳಿ ನಡೆಸಿದ್ದಾರೆ. ಕಿರಣ್ ತನ್ನ ಬಳಿಯಿದ್ದ ಚಾಕುವಿನಿಂದ ಸುರೇಶ್ ಅವರಿಗೆ ಮನಬಂದಂತೆ ಇರಿದು ಮಾರಣಾಂತಿಕ ಗಾಯಗೊಳಿಸಿದ್ದು, ಅಖಿಲೇಶ್ ಈ ಕೃತ್ಯಕ್ಕೆ ಸಾಥ್ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುರೇಶ್ ಅವರ ಕಿರುಚಾಟ ಕೇಳಿ ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ಮೃತರ ಪುತ್ರ ಸುಭಾಷ್ ನೀಡಿದ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.