Home Dskshina Kannada ವಿವೇಕಾನಂದರ ಚಿಂತನೆಗಳು ಇಂದಿಗೂ ಸ್ಫೂರ್ತಿ : ರಮಿತಾ ಸೂರ್ಯವಂಶಿ..!

ವಿವೇಕಾನಂದರ ಚಿಂತನೆಗಳು ಇಂದಿಗೂ ಸ್ಫೂರ್ತಿ : ರಮಿತಾ ಸೂರ್ಯವಂಶಿ..!

ಪುತ್ತೂರು: ಭಾರತ ದೇಶ ಯಾವಾಗಲೂ ತಾರುಣ್ಯ ರಾಷ್ಟ್ರವಾಗಿರಬೇಕೆಂಬುದು ಸ್ವಾಮಿ ವಿವೇಕಾನಂದರ ಕನಸಾಗಿತ್ತು. ನಾವು ಇಡುವ ಹೆಜ್ಜೆ ಹೇಗಿರಬೇಕೆಂದರೆ ಹಿಂದೆತಿರುಗಿ ನೋಡಿದರೂ ಕಾಣುವಂತೆ, ಮರಳುಗಾಡಿನಲ್ಲಿ ನಡೆದರೂ ಹೆಜ್ಜೆಗುರುತು ಗೋಚರಿಸುವಂತಿರಬೇಕು. ಪ್ರತಿಯೊಬ್ಬ ಭಾರತೀಯ ಪ್ರಜೆಯೂ ವಿದ್ಯಾವಂತನಾಗಬೇಕು. ವಿವೇಕಾನಂದರ ನೈತಿಕತೆಯನ್ನು ಬೆಳೆಸಿಕೊಂಡು ಉನ್ನತ ಮಟ್ಟದ ಗುರಿಯನ್ನು ಹೊಂದಿ ದೇಶವನ್ನೇ ಬೆಳಗುವಂತಾಗಬೇಕು ಎಂದು ಕಾರ್ಕಳದ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಮಿತಾ ಸೂರ್ಯವಂಶಿ ಹೇಳಿದರು.

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ವಿವೇಕಾನಂದ ಸ್ನಾತಕೋತ್ತರಅಧ್ಯಯನಕೇಂದ್ರ, ವಿವೇಕಾನಂದ ಸಂಶೋಧನಾಕೇಂದ್ರ ಮತ್ತು ಐಕ್ಯೂಎಸಿ ಹಾಗೂ ತೆಂಕಿಲ ವಿವೇಕಾನಂದಆಂಗ್ಲ ಮಾಧ್ಯಮ ಶಾಲೆ ಇದರ ಸಹಯೋಗದಲ್ಲಿ ನಡೆದ 25ನೇ ಸಂಚಿಕೆಯ ವಿವೇಕ ಸ್ಮೃತಿಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.

ವಿವೇಕಾನಂದರು ಬಹು ಹಸನ್ಮುಖಿ ವ್ಯಕ್ತಿ. ನಮ್ಮಿಂದ ಯಾವುದೂ ಸಾಧ್ಯವಿಲ್ಲ ಎಂದುಕೊಂಡಾಗ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ನೋಡಿ ಅವರ ವ್ಯಕ್ತಿತ್ವವನ್ನು ಜ್ಞಾಪಿಸಿಕೊಂಡರೆ ನಾನು ಎಲ್ಲವನ್ನೂ ಸಾಧಿಸಬಲ್ಲೆ ಎಂಬ ಆತ್ಮಸ್ಥೈರ್ಯ ಮೂಡುತ್ತದೆ. ಅವರ ಚಿಂತನೆಗಳು ಇಂದಿಗೂ ಜೀವಂತವಾಗಿವೆ. ಇಂದು ರಾಷ್ಟ್ರದಲ್ಲಿ ನಡೆಯುವ ಅನೇಕ ಪ್ರಗತಿಪರ ಕಾರ್ಯಗಳಿಗೆ ಸ್ವಾಮೀಜಿಯವರೇ ಸ್ಫೂರ್ತಿ.

ನಾವಿಂದು ವಿಶ್ವಕ್ಕೆ ಐದನೇ ಶ್ರೀಮಂತ ರಾಷ್ಟವಾದ ನವಭಾರತ ಪರ್ವದಲ್ಲಿ ಜೀವಿಸುತ್ತಿದ್ದೇವೆ. ಇಂದಿನ ಯುವಕರೆಲ್ಲರೂ ಬಲಿಷ್ಠರು, ವಿದ್ಯಾವಂತರು, ಉತ್ತಮ ಆಲೋಚನೆ ಹಾಗೂ ಉನ್ನತ ವ್ಯಕ್ತಿತ್ವ ಹೊಂದಿದ ಭಾರತದ ಪ್ರಜೆಗಳಾಗಬೇಕು ಎಂದು ನುಡಿದರು.

ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ರವಿನಾರಾಯಣ ಎಮ್‍ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಇತ್ತೀಚಿನ ದಿನಗಳಲ್ಲಿ ವಿಕಸಿತ ಹಾಗೂ ಆತ್ಮನಿರ್ಭರ ಭಾರತ ಎಂಬ ಎರಡು ಶಬ್ದಗಳನ್ನು ನಾವು ಪದೇ ಪದೇ ಕೇಳುತ್ತಿದ್ದೇವೆ. ವಿವೇಕಾನಂದರೇ ಇದಕ್ಕೆ ಪ್ರೇರಣೆ ಎಂದರೆ ತಪ್ಪಾಗಲಾರದು. ಸ್ವಾಮಿ ವಿವೇಕಾನಂದರು ಪರಕೀಯರ ಆಳ್ವಿಕೆಯಲ್ಲಿದ್ದಾಗಲೇ ಭಾರತೀಯರ ಇರುವಿಕೆಯನ್ನುಇಡೀ ಪ್ರಪಂಚದೆದುರು ತೆರೆದಿಟ್ಟವರು. ನಾವು ಆಧ್ಯಾತ್ಮ ಭಾರತದ ಚಿಂತನೆಯನ್ನು ಪೂರಕವಾಗಿರಿಸಿಕೊಂಡು ಭವಿಷ್ಯದ ಹೆಜ್ಜೆಯನ್ನಿಟ್ಟರೆ ಭಾರತ ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲ. ಪ್ರತಿಯೊಬ್ಬರೂ ವಿಕಸಿತ ಭಾರತದ ಚಿಂತನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸೋಣ ಎಂದರು.

ವೇದಿಕೆಯಲ್ಲಿ ಸಂಸ್ಥೆಯ ಹಿರಿಯ ಪ್ರಾಧ್ಯಾಪಕ ರಾಧಾಕೃಷ್ಣರೈ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾಎಸ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿವೇಕಾನಂದ ಸಂಶೋಧನಾಕೇಂದ್ರ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರು ಹಾಗೂ ಸ್ನಾತಕೋತ್ತರ ವಿಭಾಗದ ಡೀನ್‍ ಡಾ. ವಿಜಯಸರಸ್ವತಿ ಸ್ವಾಗತಿಸಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಕವಿತಾ ಕೆ ಜಿ ವಂದಿಸಿದರು. ಸ್ನಾತಕೋತ್ತರ ಎಂಕಾಂ ವಿಭಾಗದ ವಿದ್ಯಾರ್ಥಿ ನವೀನ್‍ಕೃಷ್ಣ ನಿರೂಪಿಸಿದರು.