Home Crime ಬೆಳ್ತಂಗಡಿ : ಬುರುಡೆ ನೀಡಿದ್ದು ಮಟ್ಟೆಣ್ಣವರ್ : ಜಯಂತ್ ಹೇಳಿಕೆ…!!

ಬೆಳ್ತಂಗಡಿ : ಬುರುಡೆ ನೀಡಿದ್ದು ಮಟ್ಟೆಣ್ಣವರ್ : ಜಯಂತ್ ಹೇಳಿಕೆ…!!

ಬೆಳ್ತಂಗಡಿ : ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಯನ್ನು ಚುರುಕುಗೊಳಿಸಿದೆ. ಎಸ್‌ಐಟಿ ತನಿಖೆ ವೇಳೆ ನಮಗೆ ಬುರುಡೆ ಕೊಟ್ಟಿದ್ದು ಗಿರೀಶ್‌ ಮಟ್ಟೆಣ್ಣವರ್‌ ಎಂದು ಜಯಂತ್‌ ಹೇಳಿರುವುದಾಗಿ ತಿಳಿದುಬಂದಿದೆ.

ಎಸ್‌ಐಟಿ ವಿಚಾರಣೆ ವೇಳೆ ಬುರುಡೆ ಸಿಕ್ಕಿದ್ದು ಎಲ್ಲಿ ಎಂಬ ಪ್ರಶ್ನೆಗೆ ಮಟ್ಟೆಣ್ಣವರ್‌ ಹೆಸರನ್ನು ಜಯಂತ್‌ ಹೇಳಿರುವುದಾಗಿ ತಿಳಿದುಬಂದಿದೆ.

ಶವ ಹೂಳಿದ ಪ್ರಕರಣಕ್ಕೆ ಸಂಬಂಧಿಸಿಂತೆ ವಿಶೇಷ ತನಿಖಾ ತಂಡ ರಚಿಸಲು ಕಾರಣವಾಗಿರುವ ಬುರುಡೆ ಸಿಕ್ಕಿದ್ದು ಎಲ್ಲಿ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಪ್ರಶ್ನೆಗೆ ಎಸ್‌ಐಟಿ ಉತ್ತರ ಹುಡುಕುತ್ತಿದೆ. ತಿಮರೋಡಿ ತೋಟದಿಂದ ಬುರುಡೆ ತಂದು ನ್ಯಾಯಾಲಯಕ್ಕೆ ನೀಡಿರುವ ಅನುಮಾನ ವ್ಯಕ್ತವಾಗಿತ್ತು.

ನ್ಯಾಯಾಲಯಕ್ಕೆ ಹಾಜರುಪಡಿಸಿದ ಬುರುಡೆ ಜೊತೆ ಇದ್ದ ಮಣ್ಣನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ಕಳುಹಿಸಿದ್ದರು. ಎಫ್‌ಎಸ್‌ಎಲ್‌ ಲ್ಯಾಬ್‌ನಲ್ಲಿ ಧರ್ಮಸ್ಥಳದ ಅಸುಪಾಸಿನಲ್ಲಿರುವ ಮಣ್ಣಿಗೂ ಬುರುಡೆಯಲ್ಲಿರುವ ಮಣ್ಣಿನ ಪಿಎಚ್.ಗೂ (ಪಿಎಚ್‌ ಎಂಬುದು ಮಣ್ಣಿನ ಆಮ್ಲೀಯತೆ ಅಥವಾ ಕ್ಷಾರೀಯತೆಯ ಅಳತೆ) ಸಾಮ್ಯತೆ ಇಲ್ಲ ಎಂಬ ವಿಚಾರ ದೃಢಪಟ್ಟಿದೆ.

ಎಫ್‌ಎಸ್‌ಎಲ್‌ನಿಂದ ಬುರುಡೆ ಸತ್ಯ ಬಹಿರಂಗ ಆದ ಬೆನ್ನಲ್ಲೇ ಎಸ್‌ಐಟಿ ಪೊಲೀಸರು ಚಿನ್ನಯ್ಯನನ್ನು ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡು ಷಡ್ಯಂತ್ರದ ಭಾಗವಾಗಿ ಬುರುಡೆ ತರಲಾಗಿತ್ತು ಎಂದಿದ್ದ. ಮತ್ತಷ್ಟು ವಿಚಾರಣೆ ನಡೆಸಿದಾಗ ಚಿನ್ನಯ್ಯ, ತಿಮರೋಡಿ ತೋಟದಿಂದ ಬುರುಡೆ ತಂದಿರುವುದಾಗಿ ಹೇಳಿದ್ದ.

ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ತಿಮರೋಡಿ ನಿವಾಸಕ್ಕೆ ಮಹಜರು ಮಾಡಲು ಬಂದಿದ್ದಾಗ ಚಿನ್ನಯ್ಯ ರಬ್ಬರ್‌ ತೋಟದ ಒಂದು ಜಾಗವನ್ನು ತೋರಿಸಿ ಇಲ್ಲಿಂದ ಬುರುಡೆ ತೆಗೆದಿರುವುದಾಗಿ ತಿಳಿಸಿದ್ದ. ಈತನ ಹೇಳಿಕೆಯಂತೆ ಪೊಲೀಸರು ರಬ್ಬರ್‌ ತೋಟದಿಂದ ಮಣ್ಣು ತೆಗೆದು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ.

ಲ್ಯಾಬ್‌ ಪರೀಕ್ಷೆಯಲ್ಲಿ ಬುರುಡೆಯಲ್ಲಿರುವ ಮಣ್ಣಿಗೂ ತಿಮರೋಡಿ ತೋಟದಲ್ಲಿರುವ ಮಣ್ಣಿಗೂ ಸಾಮ್ಯತೆ ಕಂಡು ಬಂದರೆ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಗುವ ಸಾಧ್ಯತೆ ಇದೆ.

ತಿಮರೋಡಿ ತೋಟದಿಂದ ಬುರುಡೆ ತಂದದ್ದು ಸಾಬೀತಾದರೆ ಮತ್ತೆ ಹಲವು ಪ್ರಶ್ನೆಗಳು ಏಳುತ್ತದೆ. ಈ ಬುರುಡೆ ತಿಮರೋಡಿ ತೋಟದಲ್ಲಿ ಮೊದಲೇ ಇತ್ತೇ? ಇದ್ದಲ್ಲಿ ಯಾರದು ಎಂಬ ಪ್ರಶ್ನೆ ಏಳುತ್ತದೆ. ಒಂದು ವೇಳೆ ಪ್ರಕರಣ ಆರಂಭಿಸಲು ಲ್ಯಾಬ್‌ ಅಥವಾ ಬೇರೆ ಯಾವುದೋ ಕಡೆಯಿಂದ ಬುರುಡೆ ತಂದು ಇಲ್ಲಿನ ಮಣ್ಣಿನಲ್ಲಿ ಹೂತು, ಬಳಿಕ ಎತ್ತಿದ್ದಾರೆಯೋ ಎಂಬ ಪ್ರಶ್ನೆಯೂ ಎದ್ದಿದೆ.