ಮಡಂತ್ಯಾರು: ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಆರ್ಥಿಕ ಅವ್ಯವಹಾರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬ್ಯಾಂಕಿನ ಮಾಜಿ ಸಿಬ್ಬಂದಿಯನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಸದಾಶಿವ ಯಾನೆ ಸುಜಿತ್ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಆತನಿಗೆ ನೆರವು ನೀಡಿರುವ ಇನ್ನೋರ್ವ ಗುಮಾಸ್ತ ಪ್ರಶಾಂತ್ ಎಂಬಾತನ ಪತ್ತೆ ಇನ್ನೂ ಆಗಿಲ್ಲ.
ಸಹಕಾರ ಸಂಘದಲ್ಲಿ ಗುಮಾಸ್ತನಾಗಿದ್ದ ಸದಾಶಿವ ಯಾನೆ ಸುಜಿತ್ ಎಂಬಾತನ ಸಹೋದರನಾಗಿರುವ ಬೆಳಾಲು ನಿವಾಸಿ ಪ್ರಕಾಶ್ ಎಂಬಾತ ಸಂಘದಲ್ಲಿ 10 ಲಕ್ಷ ರೂ.ಗಳನ್ನು 3 ವರ್ಷಗಳ ಅವಧಿಗೆ ಠೇವಣಿ ಇರಿಸಿದ್ದ. ಬಳಿಕ ಆ ಠೇವಣಿಯ ಆಧಾರದಲ್ಲಿ 3.50 ಲಕ್ಷ ರೂ. ಸಾಲ ಪಡೆದಿದ್ದ, 2025ರ ಎ. 28ರಂದು ಸಂಘಕ್ಕೆ ಸುಳ್ಳು ದೂರು ಅರ್ಜಿ ಸಲ್ಲಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಯವರು ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ತನ್ನ ಪೂರ್ತಿ ಠೇವಣಿ 10 ಲಕ್ಷ ರೂ.ಗಳನ್ನು ಬಡ್ಡಿ ಸಹಿತ ಮರು ಪಾವತಿಸಬೇಕು ಎಂದು ಕೋರಿದ್ದ. ನಿಜ ವಿಚಾರವನ್ನು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಿಳಿಹೇಳಿದರೂ ಪ್ರಕಾಶ ಕೇಳಿಸಿಕೊಳ್ಳದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿರುವುದಲ್ಲದೆ ಪದೇ ಪದೆ ಸಂಘದ ಕಚೇರಿಗೆ ಬಂದು ಸಿಬ್ಬಂದಿಯನ್ನು ನಿಂದಿಸಿ ಜೀವ ಬೆದರಿಕೆ ಹಾಕುತ್ತಿದ್ದ ಎಂದು ಸಂಘದ ಅಧ್ಯಕ್ಷರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ.
ಇದೀಗ ಮಂಗಳೂರಿನ ಪಡೀಲ್‌ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಎಸ್‌ಐ ಸಮರ್ಥ್ ಆರ್. ಗಾಣಿಗೇರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಸೆ.5ರಂದು ವಶಕ್ಕೆ ಪಡೆದಿತ್ತು ಎಂದು ತಿಳಿದು ಬಂದಿದೆ.
ಸೆ. 6ರಂದು ಸಂಜೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.