ಸುಳ್ಯ : ಒಂದು ವಾರದ ಹಿಂದೆ ಹಳೆಗೇಟು ನಿವಾಸಿ ತಾಹಿರಾ ಎಂಬವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರ ಮನೆಯವರು ಪತಿ ಮತ್ತು ಆತನ ಸಹೋದರನ ವಿರುದ್ಧ ಸುಳ್ಯ ಪೊಲೀಸ್ ವೃತ ನಿರೀಕ್ಷಕರ ಕಚೇರಿಯಲ್ಲಿ ದೂರು ನೀಡಿದ್ದಾರೆ.
ತಾಹಿರಾ ಮೃತಪಟ್ಟ ದಿನ ಸುಳ್ಯ ಠಾಣೆಯಲ್ಲಿ ನೀಡಿದ್ದ ದೂರಿನಲ್ಲಿ ಸರಿಯಾಗಿ ನಾವು ಹೇಳಿದ್ದನ್ನು ಉಲ್ಲೇಖ ಮಾಡಿಲ್ಲ, ಸರಿಯಾಗಿ ತನಿಖೆ ಆಗಿಲ್ಲ ಎಂದು ತಾಹಿರಾರ ಮನೆಯವರು ಸ್ಪೀಕರ್ ಯು.ಟಿ.ಖಾದರ್‌ರ ಬಳಿ ತೆರಳಿ ನಮ್ಮ ಮಗಳಿಗೆ ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದರು. ಬಳಿಕ ಎಸ್ಪಿಯವರ ಆದೇಶದ ಮೇರೆಗೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮರು ದೂರು ನೀಡಿದ್ದಾರೆ.
ಆ.28ರಂದು ತಾಹಿರಾರ ಪತಿ ಲತೀಫ್ ದೂರವಾಣಿ ಕರೆ ಮಾಡಿ ನಿಮ್ಮ ಮಗಳು ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾನೆ. ನನ್ನ ಮಗಳ ಆತ್ಮಹತ್ಯೆಗೆ ಆಕೆಯ ಪತಿ ಲತೀಫ್ ಹಾಗೂ ಆತನ ಸಹೋದರ ರಫೀಕ್‌ರ ಕಿರುಕುಳ ಕಾರಣವಾಗಿದ್ದು ಅವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮೃತಳ ತಾಯಿ ಮರು ದೂರು ನೀಡಿದ್ದಾರೆ.
ದೂರು ಸ್ವೀಕರಿಸಿರುವ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.