Home Kundapura News ವಂಡ್ಸೆ ಸೇತುವೆಯಿಂದ ಹೊಳೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ: ಪತ್ನಿ ಹಾಗೂ ಬಾವನ ವಿರುದ್ಧ ಪ್ರಕರಣ ದಾಖಲು 

ವಂಡ್ಸೆ ಸೇತುವೆಯಿಂದ ಹೊಳೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ: ಪತ್ನಿ ಹಾಗೂ ಬಾವನ ವಿರುದ್ಧ ಪ್ರಕರಣ ದಾಖಲು 

ಕೊಲ್ಲೂರು: ಕುಟುಂಬ ಕಲಹ ಹಾಗೂ ಮಾನಸಿಕ ಕಿರುಕುಳದಿಂದ ಮನನೊಂದು ವ್ಯಕ್ತಿಯೋರ್ವರು ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರು ತಾಲೂಕಿನ ವಂಡ್ಸೆ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ನಾಡ ಗ್ರಾಮದ ಸುಧಾಕರ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ಈ ಹಿಂದೆ ಮುಂಬೈನಲ್ಲಿ ಹೋಟೆಲ್‌ ಕೆಲಸ ಮಾಡಿಕೊಂಡಿದ್ದು, ಸುಮಾರು ಒಂದು ವರ್ಷದ ಹಿಂದೆ ಊರಿಗೆ ಬಂದು ಪತ್ನಿ ಗುಣರತ್ನಾಳ ಮನೆಯಾದ ವಂಡ್ಸೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಗಂಡ-ಹೆಂಡತಿ ನಡುವೆ ಸಣ್ಣಪುಟ್ಟ ಜಗಳಗಳು ನಡೆಯುತ್ತಿದ್ದು, ಈ ಬಗ್ಗೆ ಮೃತರ ತಂದೆ ಸೂಲ್ಯಣ್ಣ ಶೆಟ್ಟಿಯವರಿಗೆ ಮಾಹಿತಿ ಇದ್ದುದಾಗಿ ತಿಳಿದುಬಂದಿದೆ. ಅಲ್ಲದೆ, ಗುಣರತ್ನಾಳು ಮೃತರ ತಾಯಿ ಸಿಂಗಾರಿ ಅವರಿಗೆ ದೂರವಾಣಿ ಕರೆ ಮಾಡಿ, ತನ್ನ ಅಣ್ಣ ನಾಗರಾಜ ಹೈದರಾಬಾದ್‌ನಿಂದ ಬಂದ ಬಳಿಕ ಸುಧಾಕರ ಶೆಟ್ಟಿಯ ಕಾಲು ಮುರಿಯುವಂತೆ ಹೇಳುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೇ 14ರಂದು ಸಂಜೆ 5:30ರ ಸುಮಾರಿಗೆ ಸುಧಾಕರ ಶೆಟ್ಟಿ ತಮ್ಮ ವಾಟ್ಸಾಪ್‌ ಸ್ಟೇಟಸ್‌ನಲ್ಲಿ “ನನ್ನ ಬಾವ ನಾಗರಾಜ ಹಾಗೂ ಪತ್ನಿ ಗುಣರತ್ನಾಳು ತೊಂದರೆ ನೀಡುತ್ತಿದ್ದು, ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ” ಎಂದು ಬರೆದುಕೊಂಡಿದ್ದರು ಎನ್ನಲಾಗಿದೆ.

ಇದಾದ ಬಳಿಕ ಸಂಜೆ 6:30ರ ಸುಮಾರಿಗೆ ಸುಧಾಕರ ಶೆಟ್ಟಿಯವರು ತಮ್ಮ ಮೋಟಾರ್‌ ಸೈಕಲ್‌ನ್ನು ವಂಡ್ಸೆ ಸೇತುವೆ ಬಳಿ ನಿಲ್ಲಿಸಿ, ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪರಿಚಿತರಿಂದ ಕುಟುಂಬಕ್ಕೆ ಮಾಹಿತಿ ಲಭಿಸಿದೆ.

ಮೃತರ ತಂದೆ ನೀಡಿದ ದೂರಿನ ಮೇರೆಗೆ ಪತ್ನಿ ಗುಣರತ್ನ ಹಾಗೂ ಬಾವ ನಾಗರಾಜ ಶೆಟ್ಟಿಯವರ ಮಾನಸಿಕ ಮತ್ತು ದೈಹಿಕ ಕಿರುಕುಳದಿಂದ ಆತ್ಮಹತ್ಯೆ ಸಂಭವಿಸಿದೆ ಎಂದು ಆರೋಪಿಸಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 36/2026 ಅಡಿಯಲ್ಲಿ ಕಲಂ 108 ಬಿಎನ್‌ಎಸ್‌ ಪ್ರಕಾರ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.