ಸಿದ್ದಾಪುರ: ಗ್ರಾಮ ವಿಕಾಸ ಸಮಿತಿ ಸಿದ್ದಾಪುರ ಮತ್ತು ಪರಿಸರ ಗತಿವಿಧಿ ಸಿದ್ದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಇತಿಹಾಸ ಪ್ರಸಿದ್ಧ ಕಾಶಿಕಲ್ಲು ಕೆರೆ ವಠಾರದಲ್ಲಿ ವಿಶ್ವ ಜಲದಿನಾಚರಣೆಯ ಅಂಗವಾಗಿ ಗಂಗಾಪೂಜೆ, ಗೋಪೂಜೆ ಹಾಗೂ ಭೂಮಿ ಸುಪೋಷಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಭಾಗದ ಗ್ರಾಮ ವಿಕಾಸ ಪರಿಸರ ವಿಭಾಗ ಪ್ರಮುಖರಾದ ಶ್ರೀಮತಿ ರಮಿತಾ ಸೂರ್ಯವಂಶಿ ಹಾಗೂ ಸಿದ್ದಾಪುರ ತಾಲೂಕು ಪರಿಸರ ಗತಿವಿಧಿ ಪ್ರಮುಖರಾದ ಆರ್ಗೋಡು ಶ್ರೀಕಾಂತ್ ಶೆಣೈ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ರಮಿತಾ ಸೂರ್ಯವಂಶಿ ಅವರು, “ನೆಲ ಮತ್ತು ಜಲ ಸಂರಕ್ಷಣೆ ಇಂದಿನ ಕಾಲದ ಅತ್ಯಂತ ಮಹತ್ವದ ಕರ್ತವ್ಯವಾಗಿದೆ. ಮುಂದಿನ ಪೀಳಿಗೆಯನ್ನು ರೋಗಮುಕ್ತಗೊಳಿಸಲು ಪ್ಲಾಸ್ಟಿಕ್ ಮತ್ತು ರಾಸಾಯನಿಕ ಕೀಟನಾಶಕಗಳು ನೀರು ಮತ್ತು ಮಣ್ಣಿಗೆ ಸೇರುವುದನ್ನು ತಡೆಯುವುದು ಅಗತ್ಯ. ನೀರು, ಮಣ್ಣು ಹಾಗೂ ಗಾಳಿ ಶುದ್ಧವಾಗಿದ್ದರೆ ಸಶಕ್ತ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವುದು ಅತ್ಯವಶ್ಯಕ” ಎಂದು ಹೇಳಿದರು.
ಶ್ರೀಕಾಂತ್ ಶೆಣೈ ಅವರು ನೀರಿನ ಸಂರಕ್ಷಣೆಯ ಅಗತ್ಯತೆಯನ್ನು ಅಂಕಿ-ಅಂಶಗಳ ಸಹಿತ ವಿವರಿಸಿದರು.
ಕಾರ್ಯಕ್ರಮದಲ್ಲಿ ವೇದಮೂರ್ತಿ ಶ್ರೀ ಸೂರಜ್ ಆಚಾರ್ಯ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಶ್ರೀ ಚಂದ್ರಾನಂದ ಶೆಟ್ಟಿ ದಂಪತಿಗಳು ಗಂಗಾ ಪೂಜೆಯಲ್ಲಿ ಭಾಗವಹಿಸಿ ಕೆರೆಗೆ ಬಾಗಿನ ಅರ್ಪಿಸಿದರು. ಶ್ರೀ ಸೂರ ಪೂಜಾರಿ ದಂಪತಿಗಳು ಭೂಮಿ ಸುಪೋಷಣ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಸಿದ್ದಾಪುರ ತಾಲೂಕು ಸಂಯೋಜಕರಾದ ಶ್ರೀಕಾಂತ್ ನಾಯಕ್, ಗ್ರಾಮ ಸಂಯೋಜಕರಾದ ಎಸ್. ಪಾಂಡುರಂಗ ಪೈ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೆಲ-ಜಲ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಹಾಗೂ ರಾಸಾಯನಿಕ ಮುಕ್ತ ಪರಿಸರ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಯಿತು.





