Home Crime ಸಿಐಡಿ ಇನ್ಸ್‌ಪೆಕ್ಟರ್‌ನಿಂದಲೇ 20 ಲಕ್ಷ ದರೋಡೆ : ಇಲಾಖೆಯ ಜೀಪ್ ಬಳಸಿ ಸುಲಿಗೆ…!!

ಸಿಐಡಿ ಇನ್ಸ್‌ಪೆಕ್ಟರ್‌ನಿಂದಲೇ 20 ಲಕ್ಷ ದರೋಡೆ : ಇಲಾಖೆಯ ಜೀಪ್ ಬಳಸಿ ಸುಲಿಗೆ…!!

ಬೆಂಗಳೂರು: ಕೇರಳ ಮೂಲದ ಉದ್ಯಮಿಗಳು ವ್ಯಾಪಾರ ಮತ್ತು ಟ್ರೇಡಿಂಗ್ ಉದ್ದೇಶಗಳಿಗಾಗಿ ಲಕ್ಷಾಂತರ ರೂಪಾಯಿ ನಗದಿನೊಂದಿಗೆ ಬೆಂಗಳೂರಿಗೆ ಬಂದು, ಮಡಿವಾಳದ ಖಾಸಗಿ ಹೋಟೆಲ್ ಒಂದರಲ್ಲಿ ತಂಗಿದ್ದರು. ಈ ಉದ್ಯಮಿಗಳ ಬಳಿ ದೊಡ್ಡ ಮೊತ್ತದ ಹಣವಿರುವ ಬಗ್ಗೆ ನಿಖರ ಮಾಹಿತಿ ಪಡೆದಿದ್ದ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, ಹಣ ಸುಲಿಗೆ ಮಾಡಲು ವ್ಯವಸ್ಥಿತ ಸ್ಕೆಚ್ ಹಾಕಿದ್ದ. ಇದಕ್ಕಾಗಿ ಆತ ಹ್ಯಾರಿಸ್, ಕುಪೇಂದ್ರ, ಶಪಿ ಮತ್ತು ಶಾನಿ ಎಂಬ ನಾಲ್ಕು ಜನ ಕ್ರಿಮಿನಲ್‌ಗಳೊಂದಿಗೆ ಕೈಜೋಡಿಸಿ ದರೋಡೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದ.ದಾಳಿಯ ದಿನದಂದು ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ನೇತೃತ್ವದ ತಂಡವು ಹೋಟೆಲ್ ಮುಂಭಾಗದಲ್ಲಿ ಇಲಾಖೆಯ ಅಧಿಕೃತ ಸಿಐಡಿ ಜೀಪನ್ನು ತಂದು ನಿಲ್ಲಿಸಿತ್ತು. ಇನ್ಸ್‌ಪೆಕ್ಟರ್ ಮಹೇಶ್ ಜೀಪಿನ ಒಳಗಡೆ ಕುಳಿತು ಇಡೀ ಕಾರ್ಯಾಚರಣೆಯ ನಿಗಾ ವಹಿಸುತ್ತಿದ್ದರೆ, ಇತ್ತ ಗ್ಯಾಂಗ್‌ನ ಇಬ್ಬರು ಸದಸ್ಯರು ಹೋಟೆಲ್ ಕೋಣೆಯೊಳಗೆ ನುಗ್ಗಿದ್ದಾರೆ.

ತಾವು ಕ್ರೈಮ್ ವಿಭಾಗದ ಪೊಲೀಸರೆಂದು ಹೇಳಿಕೊಂಡು ನಕಲಿ ಗುರುತಿನ ಚೀಟಿ ತೋರಿಸಿದ ಆರೋಪಿಗಳು, ನೀವು ಅಕ್ರಮವಾಗಿ ಟ್ರೇಡಿಂಗ್ ಮಾಡಲು ಹಣ ತಂದಿದ್ದೀರಿ, ನಿಮ್ಮನ್ನು ಬಂಧಿಸುತ್ತೇವೆ ಎಂದು ಉದ್ಯಮಿಗಳನ್ನು ತೀವ್ರವಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ. ಇದರಿಂದ ತೀವ್ರ ಭಯಭೀತರಾದ ಉದ್ಯಮಿಗಳಿಂದ ಬರೋಬ್ಬರಿ 20 ಲಕ್ಷ ರೂಪಾಯಿ ಹಣವನ್ನು ಕಿತ್ತುಕೊಂಡ ದರೋಡೆಕೋರರು, ಹೊರಗೆ ಕಾಯುತ್ತಿದ್ದ ಅದೇ ಸಿಐಡಿ ಜೀಪ್ ಹತ್ತಿ ಪರಾರಿಯಾಗಿದ್ದಾರೆ ಇನ್ಸ್‌ಪೆಕ್ಟರ್ ಸೇರಿ ನಾಲ್ವರು ನಾಪತ್ತೆ: ತೀವ್ರ ಶೋಧ

ತಮ್ಮ ತಂಡದ ಸಹಚರ ಕುಪೇಂದ್ರ ಪೊಲೀಸ್ ಬಲೆಗೆ ಸಿಕ್ಕಿಬೀಳುತ್ತಿದ್ದಂತೆ ಎಚ್ಚೆತ್ತ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಸೇರಿದಂತೆ ಉಳಿದ ನಾಲ್ವರು ಆರೋಪಿಗಳು ರಾತ್ರೋರಾತ್ರಿ ತಲೆಮರೆಸಿಕೊಂಡಿದ್ದಾರೆ. ಸದ್ಯ ಪೊಲೀಸರು ದರೋಡೆಗೆ ಬಳಸಿದ್ದ ಸಿಐಡಿ ಜೀಪನ್ನು ವಶಕ್ಕೆ ಪಡೆದಿದ್ದು, ಕಾನೂನು ರಕ್ಷಕನ ಮುಖವಾಡ ಕಳಚಿ ದರೋಡೆಕೋರನಾಗಿ ಬದಲಾಗಿರುವ ಇನ್ಸ್‌ಪೆಕ್ಟರ್ ಮಹೇಶ್ ಮತ್ತು ಆತನ ಇತರೆ ಸಹಚರರ ಪತ್ತೆಗಾಗಿ ಬೆಂಗಳೂರು ಹಾಗೂ ನೆರೆ ಜಿಲ್ಲೆಗಳಲ್ಲಿ ವ್ಯಾಪಕ ಜಾಲ ಬೀಸಿದ್ದಾರೆ