Home Crime ದೆಹಲಿ: ಚಲಿಸುತ್ತಿದ್ದ ಸ್ಲೀಪರ್ ಬಸ್​ನಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್; ಚಾಲಕ, ಕಂಡಕ್ಟರ್ ಅರೆಸ್ಟ್

ದೆಹಲಿ: ಚಲಿಸುತ್ತಿದ್ದ ಸ್ಲೀಪರ್ ಬಸ್​ನಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್; ಚಾಲಕ, ಕಂಡಕ್ಟರ್ ಅರೆಸ್ಟ್

ನವದೆಹಲಿ: ಚಲಿಸುತ್ತಿದ್ದ ಸ್ಲೀಪರ್ ಬಸ್​ನಲ್ಲಿ 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ದೆಹಲಿಯ ನಂಗ್ಲೋಯಿ ಪ್ರದೇಶದಲ್ಲಿ ನಡೆದಿದೆ.

 

ಪ್ರಕರಣ ಸಂಬಂಧ ಬಸ್ ಚಾಲಕ ಮತ್ತು ಕಂಡಕ್ಟರ್​ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

 

ಆರೋಪಿಗಳು ಸೋಮವಾರ ತಡರಾತ್ರಿ ಈ ಕೃತ್ಯ ಎಸಗಿದ್ದಾರೆ. ಪಿತಾಂಪುರದ ಕೊಳೆಗೇರಿಯಲ್ಲಿ ವಾಸಿಸುವ ಮಹಿಳೆ ಮಂಗೋಲ್‌ಪುರಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿ ಕಾಲ್ನಡಿಗೆಯಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

ಸರಸ್ವತಿ ವಿಹಾರ್‌ನ ಬಿ – ಬ್ಲಾಕ್ ಬಸ್ ನಿಲ್ದಾಣಕ್ಕೆ ಸಂತ್ರಸ್ತ ಮಹಿಳೆ ಬಂದಿದ್ದರು. ಈ ವೇಳೆ, ಅಲ್ಲೇ ನಿಂತಿದ್ದ ಸ್ಲೀಪರ್ ಬಸ್​​ನ ಬಾಗಿಲಲ್ಲಿದ್ದ ವ್ಯಕ್ತಿಯನ್ನು ಸಮಯ ಎಷ್ಟಾಗಿದೆ ಎಂದು ಕೇಳಿದ್ದರು. ಆಗ ಆತ ಸಹಾಯ ಮಾಡುವ ಬದಲು, ಮಹಿಳೆಯನ್ನು ಬಸ್ಸಿನೊಳಗೆ ಬಲವಂತವಾಗಿ ಎಳೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್​ನೊಳಗೆ ಎಳೆದುಕೊಂಡ ಬಳಿಕ ತಕ್ಷಣವೇ ಬಾಗಿಲನ್ನು ಮುಚ್ಚಿದ್ದಾರೆ. ನಂತರ ಸುಮಾರು ಎರಡು ಗಂಟೆಗಳ ಕಾಲ 7 ಕಿಮೀವರೆಗೆ ಬಸ್ ಓಡಿಸಿದ್ದಾರೆ. ಈ ವೇಳೆ, ಇಬ್ಬರು ಆರೋಪಿಗಳು ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಗಾಯಗೊಂಡ ಸ್ಥಿತಿಯಲ್ಲಿ ನನ್ನನ್ನು ಬಸ್​​ನಿಂದ ಹೊರಗೆಸೆದು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

 

ಬಸ್ ಪರದೆಗಳನ್ನು ಹೊಂದಿದ್ದರಿಂದ ಒಳಗಡೆ ಏನಾಗುತ್ತದೆ ಎಂಬುದು ಹೊರಗಡೆಯವರಿಗೆ ಕಾಣಿಸಿಲ್ಲ. ಘಟನೆ ಬಳಿಕ ಸಂತ್ರಸ್ತೆ ದೂರು ನೀಡಿದ್ದಾರೆ ಎಂದು ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ.

 

ಸಂತ್ರಸ್ತೆಯ ದೂರಿನ ಆಧಾರಿಸಿ ರಾಣಿ ಬಾಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉಮೇಶ್ ಮತ್ತು ರಾಜೇಂದ್ರ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಕೃತ್ಯಕ್ಕೆ ಬಳಸಿದ ಬಿಹಾರ ನೋಂದಣಿ ಸಂಖ್ಯೆ ಹೊಂದಿರುವ ಬಸ್​ ಅನ್ನು ಸಹ ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರೂ ಸೂಚಿಸಿದರೂ ಸಂತ್ರಸ್ತೆ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಕ್ಷಯ ರೋಗದಿಂದ ಬಳಲುತ್ತಿರುವ ಪತಿ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದಾಗಿ ಮನೆಯಿಂದಲೇ ಚಿಕಿತ್ಸೆ ಪಡೆಯುವುದಾಗಿ ಮಹಿಳೆ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.