Home Karnataka News ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ಫಲಿತಾಂಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ : ರಾಜೇಗೌಡ ಅವರ...

ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ಫಲಿತಾಂಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ : ರಾಜೇಗೌಡ ಅವರ ಶಾಸಕ ಸ್ಥಾನ ಮರುಸ್ಥಾಪನೆಗೆ ಆದೇಶ…!!

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ವಿವಾದ ಈಗ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಮಹತ್ವದ ಘಟ್ಟ ತಲುಪಿದೆ. ಈ ಹಿಂದೆ ಅಂಚೆ ಮತಗಳ ಎಣಿಕೆಯಲ್ಲಿ ನಡೆದ ಗೊಂದಲದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಅತ್ಯಲ್ಪ ಮತಗಳ ಅಂತರದಿಂದ ಜಯ ಸಾಧಿಸಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಆದರೆ ಈ ಗೆಲುವನ್ನು ಪ್ರಶ್ನಿಸಿ ಟಿ.ಡಿ. ರಾಜೇಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈಗ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಹತ್ವದ ಆದೇಶ ನೀಡಿದೆ. ನ್ಯಾಯಾಲಯದ ಈ ನಿರ್ಧಾರದಿಂದಾಗಿ ಮರುಮತ ಎಣಿಕೆ ಕುರಿತಾದ ಹೈಕೋರ್ಟ್‌ ಆದೇಶಕ್ಕೆ ತಡೆ ಬಿದ್ದಂತಾಗಿದ್ದು, ಡಿ.ಎನ್. ಜೀವರಾಜ್ ಅವರಿಗೆ ತಾತ್ಕಾಲಿಕ ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟ್‌ ಮುಂದಿನ ಆದೇಶದವರೆಗೆ ಟಿ.ಡಿ. ರಾಜೇಗೌಡ ಅವರೇ ಕ್ಷೇತ್ರದ ಶಾಸಕರಾಗಿ ಮುಂದುವರಿಯಲಿದ್ದಾರೆ.

ನ್ಯಾಯಾಲಯವು ಈ ಸಂಬಂಧ ಚುನಾವಣಾ ಆಯೋಗಕ್ಕೆ ನೋಟಿಸ್‌ ಜಾರಿ ಮಾಡಿದ್ದು, ಚುನಾವಣೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಲಾಗಿದ್ದು, ಶೃಂಗೇರಿ ಕ್ಷೇತ್ರದ ರಾಜಕೀಯ ಭವಿಷ್ಯದ ಮೇಲೆ ಇಡೀ ರಾಜ್ಯದ ಕುತೂಹಲ ನೆಟ್ಟಿದೆ.