ಮಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆಂಬ ದೂರಿನ ಮೇರೆಗೆ ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸರು ಮತ್ತೊಂದು ಎಫ್‌ಐಆರ್ ದಾಖಲಿಸಿದ್ದಾರೆ.
ಮಟ್ಟಣ್ಣವರ್ ಮತ್ತು ತಿಮರೋಡಿ ಸಮಾಜದ ಸೌಹಾರ್ದ ವಾತಾವರಣ ಕದಡಲು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಧರ್ಮಸ್ಥಳ ಗ್ರಾಮದ ಪ್ರವೀಣ್ ಕೆ.ಆರ್ ಎಂಬವರು ಪೊಲೀಸ್ ದೂರು ನೀಡಿದ್ದಾರೆ.
ಆ.30ರಂದು ಯುಟ್ಯೂಬ್‌ನಲ್ಲಿ ಕಂಡ ವಿಡಿಯೋದಲ್ಲಿ ಮದನ್ ಬುಗುಡಿ ಎಂಬ ವ್ಯಕ್ತಿಯ ಜತೆಗೂಡಿ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಗಿರೀಶ್ ಮಟ್ಟಣ್ಣವರ್ ಸಮಾಜದ ಸ್ವಾಸ್ಥ್ಯ ಕದಡುವ ಮಾತುಗಳನ್ನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇಲ್ಲ ಸಲ್ಲದ ಹೇಳಿಕೆ ಮೂಲಕ ಸಮಾಜದಲ್ಲಿ ಸೌಹಾರ್ದ ಕೆಡಿಸುವ ಮತ್ತು ಭಾವನೆಗಳಿಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪ್ರವೀಣ್ ಕೆ.ಆರ್ ದೂರಿನಲ್ಲಿ ತಿಳಿಸಿದ್ದಾರೆ. ಬ್ಲಾಗರ್‌ಗಳು ಮತ್ತು ಇತರ ಕೆಲವು ವ್ಯಕ್ತಿಗಳನ್ನು ಸೇರಿಸಿಕೊಂಡು ಇಬ್ಬರೂ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಸಂಚು ಹೂಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆಯ ಕಲಂ 204, 319(2), 353(2), ಮತ್ತು 3(5) ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ಅರುಣ್ ತಿಳಿಸಿದ್ದಾರೆ.
