ಕೇರಳ : ಕೇರಳದಲ್ಲಿ ಹಾವು ಕಡಿತಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಇದರೊಂದಿಗೆ ಕೇರಳದಲ್ಲಿ ಒಂದು ತಿಂಗಳಿನಲ್ಲಿ ಹಾವು ಕಡಿತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ 8ಕ್ಕೇ ಏರಿಕೆಯಾಗಿದೆ. ಥೊಂಡರನಾಡ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುತುಸ್ಸೇರಿಯಲ್ಲಿ ಹಾವು ಕಚ್ಚಿ 32 ವರ್ಷದ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.
ತರುವನಮಿಟ್ಟಂ ಬುಡಕಟ್ಟು ನಿವಾಸಿ, ಕೃಷಿ ಕಾರ್ಮಿಕ ಸುನಿಲ್ ಮೃತಪಟ್ಟ ದುರ್ದೈವಿ. ಮಂಗಳವಾರ ಮಧ್ಯಾಹ್ನ ಸುನಿಲ್ ತಮ್ಮ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಕೃಷಿ ಕೆಲಸಕ್ಕೆ ಹೋಗುತ್ತಿದ್ದ ಸುನಿಲ್, ಮಂಗಳವಾರ ಬೆಳಿಗ್ಗೆ ಮನೆಯಿಂದ ಹೊರಬಂದಿರಲಿಲ್ಲ. ಮನೆಯ ಬಾಗಿಲು ಮುಚ್ಚಿದ್ದರಿಂದ ಅವರು ಎಂದಿನಂತೆ ಕೆಲಸಕ್ಕೆ ಹೋಗಿರಬಹುದು ಎಂದು ಕುಟುಂಬಸ್ಥರು ಹಾಗೂ ಸಂಬಂಧಿಕರು ಭಾವಿಸಿದ್ದರು. ಆದರೆ, ಮಧ್ಯಾಹ್ನವಾದರೂ ಸುನಿಲ್ ಹೊರಬರದಿದ್ದಾಗ ಸಂಶಯಗೊಂಡು ಬಾಗಿಲು ತೆರೆದು ನೋಡಿದಾಗ ಅವರು ಕೋಣೆಯೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ತಕ್ಷಣವೇ ಅವರನ್ನು ಸಮೀಪದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಯುವಕನ ಸಾವು ಆರಂಭದಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರು. ಮಾನಂತವಾಡಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, ದೇಹದಲ್ಲಿ ಹಾವಿನ ವಿಷ ಪತ್ತೆಯಾಗಿದ್ದು, ಹಾವು ಕಡಿತವೇ ಸಾವಿಗೆ ನೇರ ಕಾರಣ ಎಂಬುದು ದೃಢಪಟ್ಟಿದೆ.
ಸುನಿಲ್ ಅವರ ಕಾಲಿನಲ್ಲಿ ಹಾವು ಕಚ್ಚಿದ ಗುರುತುಗಳು ಪತ್ತೆಯಾಗಿವೆ. ಅವರು ಗಾಢ ನಿದ್ರೆಯಲ್ಲಿದ್ದಾಗ ಹಾವು ಕಚ್ಚಿರಬಹುದು ಅಥವಾ ಕೆಲಸದ ಅವಧಿಯಲ್ಲಿ ಹಾವು ಕಚ್ಚಿದ್ದರೂ ಅವರು ಅದನ್ನು ಗಮನಿಸದೇ ಹೋಗಿರಬಹುದು,ಎಂದು ಅಧಿಕಾರಿಗಳು ಶಂಕಿಸಿದ್ದಾರೆ.




