ಉಡುಪಿ: ಸೇವಾ ನ್ಯೂನತೆ, ಅನ್ಯಾಯದ ವ್ಯಾಪಾರ ಸಾಬೀತಾದ ಹಿನ್ನೆಲೆಯಲ್ಲಿ ಚೋಳಮಂಡಲಂ ಜನರಲ್ ಇನ್ಶೂರೆನ್ಸ್ ಕಂಪನಿಗೆ 15 ಲಕ್ಷ ರೂ. ಹಾಗೂ ಶೇ.9 ಬಡ್ಡಿಯೊಂದಿಗೆ ಪರಿಹಾರ ಮೊತ್ತವನ್ನು ಗ್ರಾಹಕರಿಗೆ ಪಾವತಿಸುವಂತೆ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾನ ನಿವಾಸಿ ವೀಣಾ ಕಾಂಚನ್ ಅವರ ಮಗ ಚರಣ್ ಕಾಂಚನ್ ಎಂಬವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ತನ್ನ ಮಗ ಹೊಂದಿದ್ದ ಕಡ್ಡಾಯ ವೈಯಕ್ತಿಕ ವಿಮಾ ಪಾಲಿಸಿ ಅಡಿಯಲ್ಲಿ ವಿಮಾ ಪರಿಹಾರ ಮೊತ್ತ ಪಡೆಯಲು ಅಗತ್ಯ ದಾಖಲೆಗಳೊಂದಿಗೆ ಕ್ಲೆಮ್ ಅರ್ಜಿ ಸಲ್ಲಿಸಿದ್ದರು. ಆದರೆ, ವಿಮಾ ಕಂಪನಿಯು ಯಾವುದೇ ಸಮಂಜಸ ಕಾರಣವಿಲ್ಲದಿದ್ದರೂ ಕ್ಲೆಮ್ ಮೊತ್ತ ಬಿಡುಗಡೆ ಮಾಡದೆ ವಿಳಂಬ ಮಾಡಿತ್ತು.
ನೊಂದ ಗ್ರಾಹಕರು ವಕೀಲರ ಮೂಲಕ ನೋಟಿಸ್ ನೀಡಿದರೂ ಸಹ ವಿಮಾ ಕಂಪನಿಯು ಪರಿಹಾರ ಮೊತ್ತ ಪಾವತಿಸಿರಲಿಲ್ಲ. ಹೀಗಾಗಿ ನ್ಯಾಯಕ್ಕಾಗಿ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಅರ್ಜಿದಾರರು ಅಗತ್ಯ ದಾಖಲೆ ಸಲ್ಲಿಸಿದ್ದರೂ, ವಿಮಾ ಕಂಪನಿಯು ಅನಗತ್ಯವಾಗಿ ಹೆಚ್ಚುವರಿ ದಾಖಲೆಗಳಾದ ಎಂಎಲ್ಸಿ ಚಿಕಿತ್ಸಾ ವರದಿ ಕೇಳಿತ್ತು. ಅದರ ಅಗತ್ಯ ಸಮರ್ಥಿಸದೆ ವಿಮಾ ಮೊತ್ತ ತಡೆಹಿಡಿದಿರುವುದು ಸೇವಾ ನ್ಯೂನತೆ ಹಾಗೂ ಅನ್ಯಾಯದ ವ್ಯಾಪಾರ ಪದ್ಧತಿ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಅರ್ಜಿದಾರರ ದೂರು ಪುರಸ್ಕರಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯವು 15 ಲಕ್ಷ ರೂ. ಮೊತ್ತವನ್ನು 23-11-2024ರಿಂದ ವಾರ್ಷಿಕ ಶೇ.9ರ ಬಡ್ಡಿ ಸಹಿತ ಪಾವತಿಸಬೇಕು ಎಂದು ಆದೇಶಿಸಿತು. ಅಲ್ಲದೆ, 25 ಸಾವಿರ ರೂ. ಪರಿಹಾರ ಹಾಗೂ 10 ಸಾವಿರ ರೂ. ವ್ಯಾಜ್ಯ ವೆಚ್ಚವನ್ನೂ ಸಹ 18&-05&-2026ರ ಆದೇಶದ ದಿನಾಂಕದಿಂದ 45 ದಿನದೊಳಗೆ ಪಾವತಿಸುವಂತೆ ನಿರ್ದೇಶಿಸಿದೆ.
ಜಿಲ್ಲಾ ಗ್ರಾಹಕ ನ್ಯಾಯಾಲಯದ ಅಧ್ಯಕ್ಷ ಸುನೀಲ್ ಟಿ. ಮಾಸರಡ್ಡಿ ಹಾಗೂ ಸದಸ್ಯೆ ಸುಜಾತಾ ಬಿ. ಕೊರಳ್ಳಿ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ. ದೂರುದಾರರ ಪರವಾಗಿ ವಕೀಲರಾದ ವಿವೇಕಾನಂದ ಮಲ್ಯ ಕಾರ್ಕಳ ಹಾಗೂ ಪ್ರವಿಣ್ ಎಂ. ಪೂಜಾರಿ ಮಲ್ಪೆ ವಾದ ಮಂಡಿಸಿದ್ದರು.




