ಮುಕ್ಕ : ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹಸವಾರ ಬಾಲಕ ಗಾಯಗೊಂಡಿರುವ ಘಟನೆ ಮುಕ್ಕ ಜಂಕ್ಷನ್‌ನಲ್ಲಿ ಸಂಭವಿಸಿದೆ.
ಮೃತರನ್ನು ಚೇಳಾಯರು ನಿವಾಸಿ ಕರುಣಾಕರ ಶೆಟ್ಟಿ(61) ಎಂದು ಗುರುತಿಸಲಾಗಿದೆ. ಚೇಳಾಯರಿನಲ್ಲಿ ವಾಸವಿರುವ ಹನುಮಂತ ಎಂಬವರ ಪುತ್ರ ವಿಶ್ವನಾಥ (16) ಗಾಯಗೊಂಡ ಬಾಲಕ. ಆತನನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೆ ಕಾರಣವಾಗಿರುವ ಕಾರಿನ ಚಾಲಕ ಹಳೆಯಂಗಡಿ ನಿವಾಸಿ ಮುಹಮ್ಮದ್ ತೌಫೀಕ್ ಎಂಬವರನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಕರುಣಾಕರ ಶೆಟ್ಟಿ ಮುಕ್ಕದ ಅಂಗಡಿಯೊ0ದರಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ ಅಂಗಡಿ ಮುಚ್ಚಿ ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ಹೊರಟವರು ಹಾಲು ಖರೀದಿಗೆ ಬಂದಿದ್ದ ನೆರೆ ಮನೆಯ ವಿಶ್ವಾನಾಥ ರನ್ನು ಕುಳ್ಳಿರಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ವೇಳೆ ಹಳೆಯಂಗಡಿ ಕಡೆಯಿಂದ ಸುರತ್ಕಲ್‌ಗೆ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಕರುಣಾಕರ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ. ಸಹಸವಾರರಾಗಿದ್ದ ವಿಶ್ವನಾಥರಿಗೆ ಕೈಕಾಲಿಗೆ ಗಂಭೀರ ಗಾಯಗಳಾಗಿದ್ದು, ಮುಕ್ಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.