Home Latest ಬ್ಯಾಂಕ್ ವಂಚನೆ ಪ್ರಕರಣ : ರಿಲಾಯನ್ಸ್ ಕಮ್ಯುನಿಕೇಷನ್‌ನ ಇಬ್ಬರು ಹಿರಿಯ ಅಧಿಕಾರಿಗಳ ಬಂಧನ

ಬ್ಯಾಂಕ್ ವಂಚನೆ ಪ್ರಕರಣ : ರಿಲಾಯನ್ಸ್ ಕಮ್ಯುನಿಕೇಷನ್‌ನ ಇಬ್ಬರು ಹಿರಿಯ ಅಧಿಕಾರಿಗಳ ಬಂಧನ

ಹೊಸದಿಲ್ಲಿ : ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಅನಿಲ್ ಅಂಬಾನಿ ಸಮೂಹದ ಕಂಪೆನಿ ರಿಲಾಯನ್ಸ್ ಕಮ್ಯುನಿಕೇಷನ್ (ಆರ್‌ಕಾಮ್)ನ ಇಬ್ಬರು ಹಿರಿಯ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಸಿಬಿಐ ಸೋಮವಾರ ತಿಳಿಸಿದೆ.

 

ಬಂಧಿತ ಅಧಿಕಾರಿಗಳನ್ನು ಆರ್‌ಕಾಮ್‌ನ ಉಪಾಧ್ಯಕ್ಷ ಅನಿಲ್ ಕಲ್ಯಾ ಹಾಗೂ ಸಹ ಅಧ್ಯಕ್ಷ ಡಿ.ವಿಶ್ವನಾಥನ್ ಎಂದು ಗುರುತಿಸಲಾಗಿದೆ. ಇವರಿಬ್ಬರನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಲಾಗುವುದು ಎಂದು ಹೇಳಿದೆ.

 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ ದೂರಿನ ಆಧಾರದಲ್ಲಿ ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ಆರ್‌ಕಾಮ್, ಅನಿಲ್ ಅಂಬಾನಿ ಮತ್ತು ಇತರರಿಗೆ ಸಂಬಂಧಿಸಿ ತನಿಖೆ ಆರಂಭಿಸಲಾಗಿದೆ.

 

ಈ ಕಂಪೆನಿಗೆ ಬ್ಯಾಂಕ್ ಸಾಲ ಮಂಜೂರು ಮಾಡಿದೆ. ಆದರೆ, ಆರೋಪಿ ಸಾಲಗಾರರ ವಂಚನೆಯ ಚಟುವಟಿಕೆಗಳ ಕಾರಣದಿಂದ ಸಾಲದಾತರಿಗೆ 2.229.05 ಕೋಟಿ.ರೂ. ನಷ್ಟ ಉಂಟಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೂರಿನಲ್ಲಿ ಆರೋಪಿಸಿದೆ.

 

17 ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ 19,694 ಕೋಟಿ. ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಆರ್‌ಕಾಮ್ ತನ್ನದೇ ಅಧಿಕಾರಿಗಳು ನಿಯಂತ್ರಿಸುತ್ತಿದ್ದ ಶೆಲ್ ಕಂಪೆನಿಗಳನ್ನು ಬಳಸಿ ಪರೋಕ್ಷ ವಹಿವಾಟುಗಳನ್ನು ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

 

ಇದಲ್ಲದೆ, ತನ್ನ ಸಮೂಹ ಸಂಸ್ಥೆಗಳೊಂದಿಗೆ ನಕಲಿ ಸೇವೆಗೆ ಸಂಬಂಧಿಸಿದ ವಹಿವಾಟುಗಳಿಗಾಗಿ ಆರ್‌ಕಾಮ್ ಸಾಲ ರಿಯಾಯತಿ ಪತ್ರ(ಎಲ್‌ಸಿ) ಪಡೆದುಕೊಂಡಿದೆ. ಇದರಿಂದ ಬ್ಯಾಂಕ್‌ಗಳಿಗೆ ಭಾರೀ ನಷ್ಟ ಉಂಟಾಗಿದೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.