Home Latest ಮಲ್ಪೆ ಬಂದರಿನಲ್ಲಿ ಪ್ರವಾಸಿಗರ ದೋಣಿ ಸಂಚಾರ ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ

ಮಲ್ಪೆ ಬಂದರಿನಲ್ಲಿ ಪ್ರವಾಸಿಗರ ದೋಣಿ ಸಂಚಾರ ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ

ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನ ಒಳಭಾಗದಲ್ಲಿ ಹೊಸದಾಗಿ ನಿರ್ಮಿಸಿರುವ ಜಟ್ಟಿ ಹಾಗೂ ಪ್ರವಾಸಿಗರ ದೋಣಿ ಸಂಚಾರದಿಂದ ಭವಿಷ್ಯದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದ್ದು, ತಕ್ಷಣವೇ ಅದನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಮನವಿಯಲ್ಲಿ, ಮಲ್ಪೆ ಬಂದರು ಸಾವಿರಾರು ಮೀನುಗಾರರ ಬದುಕಿನ ಆಧಾರವಾಗಿದ್ದು, ದಿ. ಟಿ.ಎ. ಪೈ ಹಾಗೂ ಮಲ್ಪೆ ಮಧ್ವರಾಜರ ಪರಿಶ್ರಮದಿಂದ ನಿರ್ಮಾಣಗೊಂಡ ಈ ಬಂದರು ಇಂದು ಮೀನುಗಾರಿಕಾ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ಬೆಳೆದಿದೆ ಎಂದು ಉಲ್ಲೇಖಿಸಲಾಗಿದೆ.

ಪ್ರತಿ ದಿನ ಸುಮಾರು 1800 ರಿಂದ 2000ಕ್ಕೂ ಅಧಿಕ ಯಾಂತ್ರೀಕೃತ ಬೋಟುಗಳು, ಸಾಂಪ್ರದಾಯಿಕ ನಾಡದೋಣಿಗಳು, ಗಿಲ್‌ನೆಟ್ ಹಾಗೂ ಕಂತುಬಲೆ ದೋಣಿಗಳು ಮೀನುಗಾರಿಕೆಗೆ ತೆರಳಿ ವಾಪಸ್ಸಾಗುತ್ತಿದ್ದು, ಮೀನು ಖಾಲಿ ಮಾಡುವ ಕಾರ್ಯ, ಐಸ್, ಡೀಸಿಲ್, ನೀರು ತುಂಬಿಸುವುದು ಹಾಗೂ ದುರಸ್ತಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಈ ನಡುವೆ ಬಂದರಿನ ಒಳಭಾಗದಲ್ಲಿ ಪ್ರವಾಸಿಗರ ದೋಣಿ ಸಂಚಾರ ಆರಂಭಿಸಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರವಾಸಿಗರ ದೋಣಿಗಳು ಮತ್ತು ಮೀನುಗಾರಿಕಾ ಬೋಟುಗಳ ನಡುವೆ ಡಿಕ್ಕಿ ಸಂಭವಿಸಿದಲ್ಲಿ ಪ್ರವಾಸಿಗರ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇದ್ದು, ಇದರಿಂದ ಬೋಟು ಕಾರ್ಮಿಕರು, ಡೈವರ್‌ಗಳು, ಸಂಘದ ಸದಸ್ಯರು ಹಾಗೂ ಬೋಟು ಮಾಲಕರಿಗೆ ಕಾನೂನು ಮತ್ತು ಇತರೆ ತೊಂದರೆಗಳು ಎದುರಾಗಬಹುದು ಎಂದು ಎಚ್ಚರಿಸಲಾಗಿದೆ.

ಈಗಾಗಲೇ ಮಲ್ಪೆ ಬಂದರಿನಲ್ಲಿ ಜಾಗದ ಕೊರತೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಯಾಂತ್ರೀಕೃತ ಬೋಟುಗಳು ಸೇರುವ ಸಾಧ್ಯತೆ ಇರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಬಹುದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಆದ್ದರಿಂದ ಮೀನುಗಾರಿಕಾ ಬಂದರಿನ ಒಳಭಾಗದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆದಿರುವ ಜಟ್ಟಿಯನ್ನು ತೆರವುಗೊಳಿಸಿ, ಪ್ರವಾಸಿಗರ ದೋಣಿ ಸೇವೆಯನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಮಲ್ಪೆ ಬಂದರನ್ನು ಸಂಪೂರ್ಣವಾಗಿ ಮೀನುಗಾರಿಕಾ ಚಟುವಟಿಕೆಗಳಿಗೆ ಮಾತ್ರ ಸೀಮಿತಗೊಳಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.